ಇಸ್ರೋ ಮತ್ತೊಂದು ಮೈಲುಗಲ್ಲು, ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

Isro

ಬೆಂಗಳೂರು, ಫೆ.6-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇಂದು ಅಂತರಿಕ್ಷ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.  ಕೌರುವಿನ ಫ್ರೆಂಚ್ ಗಯಾನಾದಿಂದ ಇಂದು ಮುಂಜಾನೆ ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-31 ಯಶಸ್ವಿಯಾಗಿ ಉಡಾವಣೆಗೊಂಡು ನಿಗದಿ ಕಕ್ಷೆ ಸೇರುವಲ್ಲಿ ಸಫಲವಾಗಿದೆ.

ಉಡಾವಣಾ ಸೇವೆಗಳನ್ನು ಒದಗಿಸುವ ಯೂರೋಪ್‍ನ ಏರಿಯನ್‍ಸ್ಪೇಸ್ ಸಂಸ್ಥೆಯ ರಾಕೆಟ್ ಮೂಲಕ ಜಿಸ್ಯಾಟ್-31 ಕಮ್ಯೂನಿಕೇಷನ್ ಸ್ಯಾಟಲೈಟ್‍ನನ್ನು ನಭಕ್ಕೆ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.

ದಕ್ಷಿಣ ಅಮೆರಿಕದ ಈಶಾನ್ಯ ಕರಾವಳಿಯಲ್ಲಿರುವ ಫ್ರೆಂಚು ಸರಹದ್ದು ಪ್ರದೇಶದ ಕೌರುವಿನ ಏರಿಯನ್ ಉಡಾವಣಾ ಸಂಕೀರ್ಣದಿಂದ 2.31ರ ನಸುಕಿನಲ್ಲಿ(ಭಾರತೀಯ ಕಾಲಾಮಾನ) ಜಿಸ್ಯಾಟ್-31 ಉಪಗ್ರಹವನ್ನು ಹೊತ್ತ ಏರಿಯನ್-5 ರಾಕೆಟ್ ನಭಕ್ಕೆ ಚಿಮ್ಮಿತು. 42 ನಿಮಿಷಗಳ ಪಯಣದ ನಂತರ ಸಂಪರ್ಕ ಉಪಗ್ರಹ ಕಕ್ಷೆಯನ್ನು ಸೇರಿತು.

ಏರಿಯನ್-5 ರಾಕೆಟ್ ಮೂಲಕ ಜಿಸ್ಯಾಟ್-31 ಗಗನನೌಕೆ ಯಶಸ್ವಿಯಾಗಿ ಉಡಾವಣೆಯಾಗಿದೆ ಎಂಬುದನ್ನು ತಿಳಿಸಲು ನಾವು ಹರ್ಷಿಸುತ್ತೇವೆ ಎಂದು ಉಡ್ಡಯನದ ನಂತರ ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ(ಎಸ್‍ಡಿಎಸ್‍ಸಿ) ನಿರ್ದೇಶಕ ಎಸ್.ಪಾಂಡಿಯನ್ ಕೌರುವಿನಲ್ಲಿ ತಿಳಿಸಿದರು.

ಉಪಗ್ರಹವನ್ನು ಯಶಸ್ವಿಯಾಗಿ ಕೊಂಡೊಯ್ದು, ನಿಗದಿತ ಕಕ್ಷೆಗೆ ಸೇರ್ಪಡೆ ಮಾಡಿದ್ದಕಾಗಿ ಏರಿಯನ್‍ಸ್ಪೇಸ್ ಸಂಸ್ಥೆಗೆ ಕೃತಜ್ಞತೆ ಮತ್ತು ಅಭಿನಂದನೆಗಳನ್ನು ಸಲ್ಲಿಸುವುದಾಗಿ ಪಾಂಡಿಯನ್ ಹೇಳಿದರು. ಜಿಸ್ಯಾಟ್-31 ಅತ್ಯಂತ ಪ್ರಬಲ ಸಂವಹನ ಉಪಗ್ರಹವಾಗಿದ್ದು, ಕು-ಬ್ಯಾಂಡ್ ಅಳವಡಿತವಾಗಿದೆ.

ಅನೇಕ ವರ್ಷಗಳಿಂದ ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸಿ ಅವಧಿ ಪೂರ್ಣಗೊಳಿಸಿರುವ ಅನೇಕ ಉಪಗ್ರಹಗಳ ಸ್ಥಾನದಲ್ಲಿ ಇದು ಕಾರ್ಯನಿರ್ವಹಿಸಲಿದೆ. ಭಾರತಕ್ಕಾಗಿ ಇದು 15 ವರ್ಷಗಳ ಕಾಲ ಕಾರ್ಯನಿರ್ವವಹಿಸಲಿದ್ದು,ಸಂವಹನ ಮತ್ತು ಸಂಪರ್ಕ ಸೇವೆಗಳಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಅವರು ವಿವರಿಸಿದರು.

ಇದು 2019ರಲ್ಲಿ ಏರಿಯನ್‍ಸ್ಪೇಸ್ ಮತ್ತು ಇಸ್ರೋ ಇವೆರಡಕ್ಕೂ ಉತ್ತಮ  ಶುಭಾರಂಭವಾಗಿದೆ ಎಂದು ಏರಿಯನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೀಫನ್ ಇಸ್ರೇಲ್ ಟ್ವಿಟ್ ಮಾಡಿದ್ದಾರೆ.

Facebook Comments

Sri Raghav

Admin