ಬಿಗ್ ಓಪನಿಂಗ್ ಪಡೆದುಕೊಂಡ ನಟಸಾರ್ವಭೌಮ

ಈ ಸುದ್ದಿಯನ್ನು ಶೇರ್ ಮಾಡಿ

Natasarvaboma

ಸ್ಯಾಂಡಲ್‍ವುಡ್‍ನಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದಂತಹ ಪವರ್‍ಸ್ಟಾರ್ ಪುನಿತ್‍ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ.

ಅಭಿಮಾನಿಗಳ ಕಾತರಕ್ಕಾಗಿ ಮಧ್ಯರಾತ್ರಿಯಿಂದಲೇ ಚಿತ್ರ ಪ್ರದರ್ಶನಗೊಂಡಿದೆ. ರಾಜ್ಯಾದ್ಯಂತ ಸುಮಾರು 400ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿರುವ ನಟಸಾರ್ವಭೌಮ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.

ಪುನೀತ್ ರಾಜ್‍ಕುಮಾರ್ ಈ ಚಿತ್ರದಲ್ಲಿ ಒಬ್ಬ ಪೋಟೋ ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಹಾರರ್, ಸಸ್ಪೆನ್ಸ್ ಹಾಗೂ ಆ್ಯಕ್ಷನ್, ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಅಪ್ಪು ಡ್ಯಾನ್ಸ್, ಆ್ಯಕ್ಷನ್ ಹಾಗೂ ಅವರ ಲುಕ್ ಖದರ್ ಭರ್ಜರಿಯಾಗಿದೆ.

ಚಿತ್ರದಲ್ಲಿ ಮತ್ತೊಮ್ಮೆ ಪವರ್‍ಸ್ಟಾರ್‍ಗೆ ಜೋಡಿಯಾಗಿ ರಚಿತಾರಾಮ್ ಅಭಿನಯಿಸಿದ್ದಾರೆ. ಹಾಗೆಯೇ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿರುವ ಅನುಪಮಾ ಪರಮೇಶ್ವರಂ ಕೂಡ ಬಣ್ಣ ಹಚ್ಚಿದ್ದಾರೆ.

ಈ ವರ್ಷದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಅಭಿನಯದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ನಟಸಾರ್ವಭೌಮ. ಈ ಪವರ್‍ಫುಲ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವುದು ನಿರ್ದೇಶಕ ಪವನ್ ಒಡೆಯರ್.

ಈ ಹಿಂದೆ ಪವನ್ ಸಾರಥ್ಯದಲ್ಲಿ ಬಂದಿದ್ದ ರಣವಿಕ್ರಮ ಎಂಬ ಮಾಸ್ ಚಿತ್ರದ ನಂತರ ಮತ್ತೊಮ್ಮೆ ಈ ಪವರ್‍ಫುಲ್ ಜೋಡಿ ಈ ಸಿನಿಮಾದ ಮೂಲಕ ಒಂದಾಗಿದೆ. ಇನ್ನು ಅಂಜನಿಪುತ್ರ ಚಿತ್ರದ ನಂತರ ಪುನೀತ್ ಅಭಿನಯದ ಯಾವುದೇ ಚಿತ್ರ ತೆರೆಗೆ ಬಂದಿಲ್ಲ. ಬಹಳ ದಿನಗಳ ನಂತರ ತೆರೆಗೆ ಬಂದಿರುವ ಪುನೀತ್ ಅಭಿನಯದ ಸಿನಿಮಾ ನಟಸಾರ್ವಭೌಮಬಾರಿ ಸದ್ದನ್ನೇ ಮಾಡುತ್ತಿದೆ.

ಈ ಚಿತ್ರವನ್ನು ಅದ್ಧೂರಿಯಾಗಿ ತೆರೆ ಮೇಲೆ ತಂದಿದ್ದಾರೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್. ಈ ಚಿತ್ರದಲ್ಲಿ ಹಿರಿಯ ನಟಿ ಬಿ.ಸರೋಜಾ ದೇವಿ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾಬಳಗವೇ ಇದ್ದು, ಡಿ.ಇಮಾನ್ ಸಂಗೀತ ನೀಡಿದ್ದಾರೆ.

ಈಗಾಗಲೇ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ವೈದ್ಯ ಎಸ್.ಛಾಯಾಗ್ರಹಣದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ನಟಸಾರ್ವಭೌಮನ ಆರ್ಭಟ ಕಂಡಂತಹ ಅಭಿಮಾನಿಗಳ ಸಂತಸ ಇಮ್ಮಡಿಗೊಂಡಿದೆ. ಇನ್ನೇನಿದ್ದರೂ ನಟಸಾರ್ವಭೌಮನ ಓಟ ಮುಂದಿನ ದಿನಗಳಲ್ಲಿ ಯಾವ ರೀತಿ ಸಾಗಲಿದೆ ಎಂಬುದನ್ನು
ನೋಡಬೇಕು.

Facebook Comments