ಸಾರ್ವಜನಿಕರಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ್ದ ಇಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

policeಬೆಂಗಳೂರು, ಫೆ.9- ಹೊಸದಾಗಿ ಕಾಲ್‍ಸೆಂಟರ್ ಹಾಗೂ ಔಟ್‍ಸೋರ್ಸಿಂಗ್ ಕಂಪೆನಿಗಳನ್ನು ತೆರೆಯಲು ಪ್ರತಿಷ್ಠಿತ ಕಂಪೆನಿಗಳ ಪ್ರೋಜೆಕ್ಟ್ ವಕ್ರ್ಸ್ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಹಳ್ಳಿ, ಗೌಡನಪಾಳ್ಯ, ಸಿರಿಪ್ಯಾರಾಮೌಂಟ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ದರ್ಶನ್ (32) ಮತ್ತು ಈತನ ಸಹಚರ ಬಿಟಿಎಂ ಲೇಔಟ್‍ನ 11ನೆ ಕ್ರಾಸ್‍ನ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಷಣ್ಮುಗ (46) ಬಂಧಿತ ಆರೋಪಿಗಳಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಡಾಸಿಟಿ ಕಾರು, ಲ್ಯಾಪ್‍ಟಾಪ್, ಮೊಬೈಲ್ ಹಾಗೂ ಅಪಾರ ಪ್ರಮಾಣದ ಪ್ರಮುಖ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ದರ್ಶನ್ ಮತ್ತು ಈತನ ಹೆಂಡತಿ ನಿಖಿತಾ ಗಾಡ್ವೆ ಆನ್‍ಲೈನ್ ಪೋರ್ಟಲ್‍ನಲ್ಲಿ ಕಂಪೆನಿ ನಡೆಸುತ್ತಿದ್ದ ಸಂಜೀತ್ ಬೋಹಾನ್ ಎಂಬಾತನ ಜತೆ ಸೇರಿಕೊಂಡು 2015ನೆ ಸಾಲಿನಲ್ಲಿ ಡಿಎನ್‍ಎಸ್ ಪ್ರೈಮ್ ಎಂಬ ಹೆಸರಿನಲ್ಲಿ ಕಂಪೆನಿಯೊಂದನ್ನು ತೆರೆದು ಆ ಕಂಪೆನಿಯಲ್ಲಿ ಸಂಜಿತ್ ಸಲಹೆಯಂತೆ ಅಮೆರಿಕದಲ್ಲಿ ನೋಂದಣಿ ಮಾಡಿಸಿ ಬೆಂಗಳೂರಿನಲ್ಲಿ ಕಚೇರಿ ತೆರೆದಿದ್ದರು.

ನಗರ ಹಾಗೂ ಹೊರರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಗೋವಾಗಳಲ್ಲಿ ಹೊಸದಾಗಿ ಸಾಫ್ಟ್‍ವೇರ್ ಕಂಪೆನಿ, ಕಾಲ್‍ಸೆಂಟರ್ ಮತ್ತು ಔಟ್‍ಸೋರ್ಸಿಂಗ್ ಪೊ್ರಸೆಸಿಂಗ್ ಕಂಪೆನಿಗಳನ್ನು ತೆರೆಯಲು ಬಯಸುವವರಿಗೆ ಹೆಸರಾಂತ ಕಂಪೆನಿಗಳಾದ ಇನ್ಫೋಸಿಸ್, ಎಚ್‍ಪಿ, ಐಬಿಎಂ, ಒರಾಕಲ್, ವಿಎಂ ವಾರಿ ಎಂಬಿತ್ಯಾದಿ ಕಂಪೆನಿಗಳ ಔಟ್‍ಸೋರ್ಸಿ ಂಗ್ ಪೊ್ರಜೆಕ್ಟ್ ಕೊಡಿಸುವುದಾಗಿ ನಂಬಿಸಿದ್ದರು.

ಈ ಕಂಪೆನಿಗಳ ನಕಲಿ ಇಮೇಲ್ ಐಡಿಗಳನ್ನು ತಾವೇ ಸೃಷ್ಟಿಸಿಕೊಂಡು ಈಮೇಲ್‍ಗಳಿಂದ ಕಾಂಟ್ರ್ಯಾಕ್ಟ್‍ಗಳನ್ನು ಕಳುಹಿಸಿ ಸಾರ್ವಜನಿಕರನ್ನು ನಂಬಿಸಿ ಕರಡು ಪತ್ರ ಕೂಡ ಮಾಡಿಕೊಡುತ್ತಿದ್ದರು.ಆರೋಪಿಗಳ ಮಾತನ್ನು ನಂಬಿದ ಸಾರ್ವಜನಿಕರು ತಮ್ಮದೇ ಕಾಲ್‍ಸೆಂಟರ್ ಕಂಪೆನಿಗಳನ್ನು ತೆರೆಯುತ್ತಿದ್ದರು.

ಈ ವಂಚಕರು ಈ ಹೊಸ ಕಂಪೆನಿಗಳಿಂದ ರಾಯಲ್‍ಟಿ ಮತ್ತು ಬಂಡವಾಳ ಎಂದು ಲಕ್ಷಾಂತರ ರೂ. ಹಣವನ್ನು ಪಡೆದುಕೊಂಡು ಅಧಿಕೃತವಲ್ಲದ ನಕಲಿ ಪೊ್ರಜೆಕ್ಟ್‍ಗಳನ್ನು ನೀಡಿ ಒಂದೆರಡು ತಿಂಗಳಲ್ಲಿಯೇ ಉದ್ದೇಶಪೂರ್ವಕವಾಗಿ ನಿಮ್ಮ ಕೆಲಸ ಕ್ವಾಲಿಟಿ ಇಲ್ಲ ಎಂದು ತಕರಾರು ತೆಗೆಯುತ್ತಿದ್ದರು.

ತದನಂತರ ಆರೋಪಿಗಳು ಈ ಕಾಂಟ್ರ್ಯಾಕ್ಟ್ ರದ್ದುಮಾಡಿ ಅವರಿಂದ ಪಡೆದಿದ್ದ ಹಣ ವಾಪಸ್ ಕೊಡದೆ ಸತಾಯಿಸುತ್ತಿದ್ದರು. ಹಣ ಹಿಂದಿರುಗಿಸುವಂತೆ ಒತ್ತಾಯ ಮಾಡುವ ಸಾರ್ವಜನಿಕರಿಗೆ ರೌಡಿ ಷಣ್ಮುಗನ ಮೂಲಕ ಬೆದರಿಕೆ ಹಾಕಿಸುತ್ತಿದ್ದರು. ತದನಂತರ ತನ್ನ ಹಳೆ ಕಂಪೆನಿ ಮುಚ್ಚಿ ಹೊಸದಾಗಿ ಫಾಕ್ಸ್‍ರನ್ ಎಂಬ ಹೆಸರಿನಲ್ಲಿ ಮತ್ತೊಂದು ನಕಲಿ ಕಂಪೆನಿ ತೆರೆದು ಅದೇ ರೀತಿ ವಂಚಿಸುತ್ತಿದ್ದರು.

2016ರಿಂದ ಇದುವರೆಗೂ ಹಲವಾರು ಗ್ರಾಹಕರಿಂದ ಕೋಟ್ಯಂತರ ರೂ. ಪಡೆದು ವಂಚಿಸಿ ಮೋಸ ಮಾಡಿದ್ದ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಜಾಡು ಹಿಡಿದ ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಅಣ್ಣಾಮಲೈ ಅವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹದೇವ ಅವರ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.

ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಆರೋಪಿಗಳಾದ ದರ್ಶನ್ ಹಾಗೂ ಷಣ್ಮುಗ ಎಂಬುವವರನ್ನು ಬಂಧಿಸಿ ವಂಚನೆಯನ್ನು ಬಯಲಿಗೆಳೆದಿದ್ದಾರೆ.

Facebook Comments