ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೇಲೆ ಸಿನಿಮೀಯ ರೀತಿಯಲ್ಲಿ ಅಧಿಕಾರಿಗಳ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

tumkurತುಮಕೂರು, ಫೆ.9-ರಾತ್ರೋರಾತ್ರಿ ಅಕ್ರಮ ಮರಳು ಫಿಲ್ಟರ್‍ಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ದಂಧೆಗೆ ಬಳಸುತ್ತಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ವಿವಿಧ ಕಡೆ ಹಳ್ಳ ಮತ್ತು ಕೆರೆಗಳಲ್ಲಿ ಅಕ್ರಮ ಮರಳು ಫಿಲ್ಟರ್ ದಂಧೆ ನಡೆಯುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರುಗಳು ವ್ಯಾಪಕವಾಗಿ ಬಂದಿದ್ದವು.

ಇದನ್ನು ಗಂಭೀರವಾಗಿ ಪರಿಗಣಿಸಿದ ಎಸಿಬಿ ಅಧಿಕಾರಿಗಳು ಅಕ್ರಮ ಮರಳು ಫಿಲ್ಟರ್ ದಂಧೆ ನಡೆಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳಾದ ಮಹಂತೇಶಪ್ಪ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಎರಡು ಬಾರಿ ದಾಳಿ ಕೂಡ ನಡೆಸಲಾಗಿತ್ತು.

ಕಳೆದ ರಾತ್ರಿ 1 ಗಂಟೆ ಸಮಯದಲ್ಲಿ ಗಂಗಸಂದ್ರ ಹಾಗೂ ಮೆಳೆಕೋಟೆ ಕೆರೆಗಳಲ್ಲಿ ನಡೆಯುತ್ತಿದ್ದ ಅಕ್ರಮ ಫಿಲ್ಟರ್ ಅಡ್ಡೆ ಮೇಲೆ ದಿಢೀರ್ ದಾಳಿ ಮಾಡಿ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಂತೇಶಪ್ಪ ಅವರ ಸೂಚನೆ ಮೇರೆಗೆ ಇಲ್ಲಿನ ಅಧಿಕಾರಿಗಳಾದ ನವೀನ್ ಅವರನ್ನೊಳಗೊಂಡ ತಂಡ ದಿಢೀರನೆ ಅಡ್ಡೆ ಮೇಲೆ ದಾಳಿ ನಡೆಸಿದಾಗ ಕತ್ತಲಲ್ಲೂ ದಂಧೆಕೋರರು ಜೀವ ಲೆಕ್ಕಿಸದೆ ಟ್ರ್ಯಾಕ್ಟರ್, ಲಾರಿಗಳ ಸಮೇತ ಪರಾರಿಯಾಗಿದ್ದಾರೆ.

ಕೆಲ ಪ್ರಭಾವಿ ವ್ಯಕ್ತಿಗಳ ಆಸರೆಯಲ್ಲಿ ಮರಳು ಫಿಲ್ಟರ್ ದಂಧೆ ನಡೆಯುತ್ತಿದೆ ಎಂದು ಸಾರ್ವಜನಿಕರಲ್ಲಿ ವ್ಯಾಪಕ ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೂಡ ನೀಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ರಾತ್ರಿ 10 ಗಂಟೆ ನಂತರ ಮರಳು ಫಿಲ್ಟರ್‍ಗಳು ಕಾರ್ಯಾಚರಣೆ ನಡೆಸುತ್ತಿದ್ದವು.

ಸರ್ಕಾರಿ ಇಲಾಖೆ ವಾಹನಗಳು, ಪೊಲೀಸರು ಬಂದರೆ ಸೂಚನೆ ನೀಡುವಂತೆ ಕಾವಲುಗಾರರನ್ನೂ ಸಹ ನೇಮಿಸಿಕೊಂಡು ಸೂಚನೆ ಬಂದ ಕೂಡಲೇ ಎಲ್ಲರೂ ನಾಪತ್ತೆಯಾಗುತ್ತಿದ್ದರು.

ಈ ಹಿಂದೆ ಕೊರಟಗೆರೆ ತಾಲೂಕಿನಲ್ಲಿ ತಹಶೀಲ್ದಾರರೊಬ್ಬರು ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೇಲೆ ದಾಳಿ ನಡೆಸಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಆಗ ಕೂದಲೆಳೆ ಅಂತರದಲ್ಲಿ ತಹಶೀಲ್ದಾರ್ ಪಾರಾಗಿದ್ದರು. ಅಂದಿನಿಂದ ಅಧಿಕಾರಿಗಳು ಮರಳು ಫಿಲ್ಟರ್ ಅಡ್ಡೆ ಮೇಲೆ ದಾಳಿ ನಡೆಸಲು ಹಿಂದೇಟು ಹಾಕುತ್ತಿದ್ದರು.

ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನವೀನ್ ಅವರ ತಂಡ ರಾತ್ರಿ 1 ಗಂಟೆ ಸಮಯದಲ್ಲಿ ಮೆಳೆಕೋಟೆ ಹಾಗೂ ಗಂಗಸಂದ್ರದಲ್ಲಿ ನಡೆಯುತ್ತಿರುವ ಅಡ್ಡೆ ಮೇಲೆ ದಾಳಿ ಮಾಡಿದಾಗ ದಂಧೆಕೋರರು ವಾಹನಗಳ ಸಮೇತ ಪರಾರಿಯಾಗಿದ್ದಾರೆ. ದಂಧೆಗೆ ಬಳಸುತ್ತಿದ್ದ ವಸ್ತುವನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.

Facebook Comments