ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಸಿದ್ಧತೆ ಪರಿಶೀಲಿಸಿದ ಶ್ರೀಗಳು

ಈ ಸುದ್ದಿಯನ್ನು ಶೇರ್ ಮಾಡಿ

Somnath-Swamijiಟಿ.ನರಸೀಪುರ, ಫೆ.9- ದಕ್ಷಿಣ ಕಾಶಿ ತ್ರಿವೇಣಿ ಸಂಗಮದಲ್ಲಿ ಫೆ.17ರಿಂದ 19ರ ವರಗೆ ಮೂರು ದಿನಗಳ ಕಾಲ ನಡೆಯಲಿರುವ ಕುಂಭಮೇಳದ ಪೂರ್ವಸಿದ್ಧತಾ ಕಾರ್ಯಗಳನ್ನು ಆದಿಚುಂಚನಗಿರಿ ಶಾಖಾಮಠದ ಶ್ರೀ ಸೋಮನಾಥ ಸ್ವಾಮೀಜಿ ಹಾಗೂ ತಾಲ್ಲೂಕಿನ ವಾಟಾಳು ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಸ್ನಾನಘಟ್ಟ, ಶೌಚಾಲಯ ಸೇರಿದಂತೆ ವಿವಿಧ ಸ್ಥಳಗಳನ್ನು ಪರಿಶೀಲಿಸಿದರು.

ಮೈಸೂರು ಆದಿಚುಂಚನಗಿರಿ ಶಾಖಾಮಠದ ಪೀಠಾಧಿಪತಿ ಶ್ರೀ ಸೋಮನಾಥ ಸ್ವಾಮೀಜಿ ಮಾತನಾಡಿ, ಫೆ.17ರಂದು ಸಪ್ತ ಕಳಶದಿಂದ ನೀರು ತಂದು ಪೂಜೆ ನಡೆಸಲಾಗುವುದು. ಧ್ವಜಾರೋಹಣ ನಡೆಸುವ ಮೂಲಕ ಕುಂಭಮೇಳಕ್ಕೆ ಚಾಲನೆ ನೀಡಲಾಗುವುದು.

ಮೊದಲನೆ ದಿನದ ಕಾರ್ಯಕ್ರಮದಲ್ಲಿ ನಡೆಸುವ ಹೋಮದ ಪೂಜೆಗಳನ್ನು ನದಿಯ ಮಧ್ಯಭಾಗದಲ್ಲಿ ನಡೆಸಲು ಚಿಂತನೆ ಮಾಡಲಾಗಿದೆ. ಯತಿವರ್ಯರು ಪುಣ್ಯಸ್ನಾನ ಮಾಡಲು ಸೂಕ್ತ ಸ್ಥಳ ಗುರುತಿಸಲು ಸ್ವಾಮೀಜಿ ಭೇಟಿ ನೀಡಿದ್ದಾರೆ.

ಮೂರು ದಿನಗಳ ಕಾಲ ನಡೆಯಲಿರುವ ವಿವಿಧ ಪೂಜಾ ಕಾರ್ಯಕ್ರಮಗಳಿಗೆ ಈಗಾಗಲೇ ಅಧಿಕಾರಿಗಳು ಉತ್ಸುಕರಾಗಿ ಕೆಲಸ-ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಾರಿ 5 ರಿಂದ 10 ಲಕ್ಷ ಜನಸಂಖ್ಯೆ ಕುಂಭಮೇಳದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಭಕ್ತರಿಗೆ ಯಾವುದೇ ರೀತಿಯ ಕೊರತೆ ಉಂಟಾಗದಂತೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ವಾಟಾಳು ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉತ್ತರ ಭಾರತದ ಅಲಹಾಬಾದ್‍ನಲ್ಲಿ ನಡೆದ ಕುಂಭಮೇಳಕ್ಕೆ ಹೆಚ್ಚು ಪ್ರಚಾರ ಸಿಕ್ಕಿದೆ. ಇದರಿಂದ ಲಕ್ಷ ಲಕ್ಷೋಪಾದಿಯಲ್ಲಿ ಸಾಧು-ಸಂತರು ಅಲ್ಲಿಗೆ ತೆರಳುತ್ತಾರೆ.

ಇಲ್ಲಿ ಪ್ರಚಾರ ಮಾಡದಿರುವುದರಿಂದ ಕುಂಭಮೇಳದ ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ. ಒಂದು ತಿಂಗಳು ಮೊದಲೆ ಪ್ರಚಾರಕ್ಕೆ ಚಾಲನೆ ಸಿಗಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೈಲಾಸಶ್ರಮದ ಕಿರಿಯ ಸ್ವಾಮೀಜಿ ಶ್ರೀ ವೆಂಕಟೇಶ್ ಚೈತನ್ಯ, ಮುಖಂಡರಾದ ಸ್ವಾಮಿನಾಥ್ ಗೌಡ, ಪಾರುಪತ್ತೇಗಾರ್ ಪವನ್, ಚನ್ನೇಗೌಡ , ಚೇತನ್ ನೀರಾವರಿ ಇಲಾಖೆಯ ವರದರಾಜು ಹಾಗೂ ಲೋಕೋಪಯೋಗಿ ಇಲಾಖೆಯ ಶಿವಶಂಕರ್, ಜಿಪಂ ಎಂಜಿನಿಯರ್ ಸುರೇಶ್ ಮತ್ತಿತರ ಅಧಿಕಾರಿಗಳು ಇದ್ದರು.

Facebook Comments