ಫೆ.18ರಂದು ವಾಸ್ತವಿಕ ಬಿಬಿಎಂಪಿ ಬಜೆಟ್

ಈ ಸುದ್ದಿಯನ್ನು ಶೇರ್ ಮಾಡಿ

bbmpಬೆಂಗಳೂರು, ಫೆ. 11- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಫೆ.18ರಂದು ಬಜೆಟ್ ಮಂಡನೆಗೆ ಸಕಲ ಸಿದ್ಧತೆ ಕೈಗೊಂಡಿದ್ದು ಈ ಬಾರಿ ವಾಸ್ತವಿಕ ಬಜೆಟ್ ಮಂಡನೆಗೆ ಒತ್ತು ನೀಡುವುದಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ತಿಳಿಸಿದರು.

ಬಜೆಟ್ ಮಂಡನೆ ಸಂಬಂಧ ಪತ್ರಕರ್ತರ ಸಲಹೆ ಸೂಚನೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಬಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು, ಎಲ್ಲಾ ವರ್ಗಗಳಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತಹ ಜನಪರ ಬಜೆಟ್ ಮಂಡಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿಗೆ ಐದು ವರ್ಷಗಳಿಗೆ 8015ಕೋಟಿ ರೂ. ಹಣ ಒದಗಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ 2300ಕೋಟಿ ರೂ.ಗಳ ಅನುದಾನ ಒದಗಿಸಲಾಗಿದ್ದು ಇದನ್ನು ಸಮರ್ಪಕ ವಾಗಿ ಬಳಕೆ ಮಾಡಿಕೊಂಡು ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವಾಸ್ತವಿಕ ಬಜೆಟ್ ಮಂಡಿಸಲಾಗುವುದು ಎಂದರು.

ಈ ಬಾರಿಯ ಬಜೆಟ್‍ನಲ್ಲಿ ಸಮರ್ಪಕಆಸ್ತಿ ತೆರಿಗೆ, ಶಿಥಿಲಾವಸ್ಥೆಯಲ್ಲಿರುವ ಆಸ್ಪತ್ರೆಗಳ ಜೀರ್ಣೋದ್ಧಾರ, ಸಣ್ಣ ಪತ್ರಿಕೆಗಳಿಗೆ ಸಹಾಯಧನ, ಕೌಶಲ್ಯ ತರಬೇತಿ ಮತ್ತಿತರ ವಿಚಾರಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಪ್ರತಿವರ್ಷ ಬಿಬಿಎಂಪಿ ಶಾಲಾ ಮಕ್ಕಳಿಗೆ ನಿಗದಿತ ಸಮಯದಲ್ಲಿ ಶಾಲಾ ಸಮವಸ್ತ್ರ ಮತ್ತು ಶೂ ನೀಡಲಾಗುತ್ತಿಲ್ಲ. ಈ ಬಾರಿ ಶಾಲೆ ಆರಂಭದಲ್ಲಿಯೇ ಮಕ್ಕಳಿಗೆ ಸಮವಸ್ತ್ರ, ಶೂ ವಿತರಿಸಲಾಗುವುದು ಎಂದು ಹೇಳಿದರು.

ಹೆಣ್ಣುಮಕ್ಕಳಿಗೆ ವಿಶೇಷ ಯೋಜನೆಗಳನ್ನು ರೂಪಿಸಲಾಗುವುದು ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ ಮಳೆ ನೀರು ಕೊಯ್ಲು, ಇಂಗು ಗುಂಡಿ ನಿರ್ಮಾಣ ಹಾಗೂ ಹಸಿರುವಲಯಗಳ ಹೆಚ್ಚಳಕ್ಕೆ ಆಧ್ಯತೆ ನೀಡಲಾಗುವುದು ಎಂದರು.

ಒಟ್ಟಾರೆ ಸಂಘ ಸಂಸ್ಥೆಗಳು, ನಾಗರಿಕರು, ತಜ್ಞರು, ಹಿರಿಯ ಮುಖಂಡರೊಂದಿಗೆ ಚರ್ಚಿಸಿ ವಾಸ್ತವಿಕ ಬಜೆಟ್ ಮಂಡಿಸಿ ಜನಮನ ಗೆಲ್ಲುವ ವಿಶ್ವಾಸವನ್ನು ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ವ್ಯಕ್ತಪಡಿಸಿದರು.

Facebook Comments