ಸದನದಲ್ಲಿ ಕೃಷ್ಣ ಭೈರೇಗೌಡರ ಮಾತಿಗೆ ಬಿಎಸ್‍ವೈ ಆಕ್ಷೇಪ

ಈ ಸುದ್ದಿಯನ್ನು ಶೇರ್ ಮಾಡಿ

bsyಬೆಂಗಳೂರು, ಫೆ.11- ಆಡಿಯೋದಲ್ಲಿರುವ ಮಾತುಗಳನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಸದನದಲ್ಲಿ ಹೇಳಬಾರದು ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದರು.

ಆಡಿಯೋ ಬಗ್ಗೆ ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದಾಗ ಸಚಿವ ಕೃಷ್ಣಬೈರೇಗೌಡ ಅವರು, ಆಡಿಯೋದಲ್ಲಿರುವ ಮಾತುಗಳು ತಮ್ಮದೇ ಮಾತು ಎಂದು ಪ್ರತಿಪಕ್ಷದ ನಾಯಕರು ಒಪ್ಪಿಕೊಂಡಿದ್ದಾರೆ ಎಂದಾಗ, ಎದ್ದು ನಿಂತ ಯಡಿಯೂರಪ್ಪ ನಾನು ಒಪ್ಪಿಕೊಂಡಿದ್ದೇನೆ ಎಂದು ಹೇಳಬೇಡಿ ಎಂದು ತಾಕೀತು ಮಾಡಿದರು.

ಈ ಪ್ರಕರಣದ ಬಗ್ಗೆ ಸುದೀರ್ಘ ಚರ್ಚೆ ನಡೆದಾಗ ಯಡಿಯೂರಪ್ಪ ತುಟಿಬಿಚ್ಚದೆ ಮೌನಿಯಾಗಿ ಕುಳಿತಿದ್ದರು. ಕೆಲವೊಮ್ಮೆ ತಲೆಎತ್ತಿ ನೋಡುತ್ತಿದ್ದರಾದರೂ, ಬಹುತೇಕ ಕಾಲ ತಲೆ ತಗ್ಗಿಸಿಯೇ ಕುಳಿತಿದ್ದರು.

ಅಧಿವೇಶನದಲ್ಲಿ ಚರ್ಚೆ ಮಾಡಿದ ಎಲ್ಲಾ ಹಿರಿಯ ಶಾಸಕರು ಸ್ಪೀಕರ್ ರಮೇಶ್‍ಕುಮಾರ್ ಅವರ ನಿಷ್ಟೆ, ಪ್ರಾಮಾಣಿಕತೆ, ಬದ್ಧತೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಲ್ಲದೆ, ಆಡಿಯೋದಲ್ಲಿ ಕೇಳಿಬಂದಿರುವ ರಮೇಶ್‍ಕುಮಾರ್ ಅವರ ಮಾತುಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿ ಪಾಳಯದಿಂದಲೂ ಆಡಿಯೋ ಬಗ್ಗೆ ಆಕ್ಷೇಪಗಳು ವ್ಯಕ್ತವಾದವು. ಆಡಿಯೋದ ಕೇಂದ್ರ ಬಿಂದು ಯಡಿಯೂರಪ್ಪ ಅವರು ಅತ್ಯಂತ ತಾಳ್ಮೆಯಿಂದ ಪ್ರತಿ ಮಾತನಾಡದೇ ಕುಳಿತಿದ್ದು, ಸದನದ ಶಿಥಲೀಕರಣದ ವಾತಾವರಣವನ್ನು ಇನ್ನಷ್ಟು ಒತ್ತಡಕ್ಕೆ ಸಿಲುಕಿಸಿತ್ತು.

ಅತ್ಯಂತ ಸೂಕ್ಷ್ಮ ವಿಚಾರವನ್ನು ಯಾರ ಹೆಸರನ್ನೂ ಪ್ರಸ್ತಾಪಿಸದಂತೆ ಬಹಳ ಎಚ್ಚರಿಕೆಯಿಂದ ಎಲ್ಲಾ ಶಾಸಕರೂ ಮಾತನಾಡಿದರು. ಸ್ಪೀಕರ್ ಅವರು ಆರಂಭದಲ್ಲಿ ಬಹಳ ಬಾವೋದ್ವೇಗಕ್ಕೆ ಒಳಗಾಗಿದ್ದರಾದರೂ ಸಿದ್ದರಾಮಯ್ಯ ಹಾಗೂ ಮತ್ತಿತರ ನಾಯಕರು ಮಾತನಾಡಿ, ನೈತಿಕ ಬೆಂಬಲ ವ್ಯಕ್ತಪಡಿಸಿದ ನಂತರ ಮನಸ್ಸು ಹಗುರ ಮಾಡಿಕೊಂಡು ಹಾಸ್ಯ ಚಟಾಕಿಗಳನ್ನು ಹಾರಿಸಲಾರಂಭಸಿದರು. ಪ್ರತಿಪಕ್ಷದ ನಾಯಕ ಯಡಿಯೂರಪ್ಪನವರು ಈ ಸಂದರ್ಭದಲ್ಲಿ ಮಾತನಾಡಲು ಮುಂದಾದಾಗ ಬಿಜೆಪಿ ಸದಸ್ಯರು ಮಾತನಾಡದಂತೆ ಅವರನ್ನು ತಡೆದರು.

Facebook Comments