ಲೋಕಸಭೆಯಲ್ಲೂ ಪ್ರತಿಧ್ವನಿಸಿದ ಆಡಿಯೋ ವಿವಾದ

ಈ ಸುದ್ದಿಯನ್ನು ಶೇರ್ ಮಾಡಿ

Mallikarjun-Khargeನವದೆಹಲಿ, ಫೆ.11- ಕರ್ನಾಟಕ ರಾಜಕಾರಣದಲ್ಲಿ ಭಾರೀ ವಿವಾದ ಮತ್ತು ಕೋಲಾಹಲಕ್ಕೆ ಕಾರಣವಾಗಿರುವ ಆಪರೇಷನ್ ಕಮಲ ಮತ್ತು ಆಡಿಯೋ ಪ್ರಕರಣ ಲೋಕಸಭೆಯಲ್ಲಿ ಇಂದು ಪ್ರತಿಧ್ವನಿಸಿ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದ ನಡುವೆ ವಾದ-ವಾಗ್ವಾದಕ್ಕೆ ಕಾರಣವಾಯಿತು.

ಶೂನ್ಯವೇಳೆಯಲ್ಲಿ ಇಂದು ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಜೆಡಿಎಸ್ ಶಾಸಕರನ್ನು ಖರೀದಿಸಲು ಬಿಜೆಪಿ ಮುಖಂಡರು ನಡೆಸಿದ ಯತ್ನದ ಆಡಿಯೋ ಬಹಿರಂಗಗೊಂಡಿದೆ. ಇದು ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಯುತ್ತಿರುವ ಕುತಂತ್ರಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಕೇಂದ್ರದ ವರಿಷ್ಠರ ಸೂಚನೆ ಮೇರೆಗೆ ರಾಜ್ಯದಲ್ಲಿ ಕುದುರೆ ವ್ಯಾಪಾರ ಮತ್ತು ಆಪರೇಷನ್ ಕಮಲದಂತಹ ಕೀಳುಮಟ್ಟ ರಾಜಕೀಯಕ್ಕೆ ಬಿಜೆಪಿ ಇಳಿದಿದೆ ಎಂದು ಖರ್ಗೆ ಆಪಾದಿಸಿದರು.

ಇದಕ್ಕೆ ದನಿಗೂಡಿಸಿದ ಮಾಜಿಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಮ್ಮ ಪಕ್ಷದ ಶಾಸಕರನ್ನು ಖರೀದಿಸಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಂಕಿ-ಅಂಶಗಳ ಸಚಿವ ಡಿ.ವಿ.ಸದಾನಂದಗೌಡ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಎರಡು ಪಕ್ಷಗಳ ನಡುವಣ ಭಿನ್ನಾಭಿಪ್ರಾಯದಿಂದ ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಇದಕ್ಕೆ ಬಿಜೆಪಿ ಕಾರಣವಲ್ಲ ಎಂದು ಹೇಳಿದಾಗ ವಾದ-ವಾಗ್ವಾದಕ್ಕೆ ಕಾರಣವಾಯಿತು.

ಲೋಕಸಭಾಧ್ಯಕ್ಷೆ ಸುಮಿತ್ರ ಮಹಾಜನ್ ಪರಿಸ್ಥಿತಿ ತಿಳಿಗೊಳಿಸಿದರು.ಕಲಾಪ ಮುಂದೂಡಿಕೆ:ಲೋಕಸಭೆಯಲ್ಲಿ ಇದಕ್ಕೂ ಮುನ್ನ ಕರ್ನಾಟಕದಲ್ಲಿ ಬಿಜೆಪಿ ನಡೆಸುತ್ತಿದೇ ಎನ್ನಲಾದ ಆಪರೇಷನ್ ಕಮಲ ಪ್ರತಿಧ್ವನಿಸಿ ಬಾರೀ ಗದ್ದಲ ಮತ್ತು ಕೋಲಾಹಲಕ್ಕೆ ಕಾರಣವಾಯಿತು. ಇದರಿಂದಾಗಿ ಕಲಾಪಕ್ಕೆ ಅಡ್ಡಿಯಾಗಿ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಸಂಸತ್ತಿನ ಬಜೆಟ್ ಅಧಿವೇಶನದ ಇಂದಿನ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಕೆ.ಸಿ.ವೇಣುಗೋಪಾಲ ಕರ್ನಾಟಕದಲ್ಲಿ ಶಾಸಕರನ್ನು ಖರೀದಿಸಲು ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಪರೇಷನ್ ಕಮಲದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.ಜೆಡಿಎಸ್ ಶಾಸಕರನ್ನು ಖರೀದಿಸಲು ಬಿಜೆಪಿ ಹಣದ ಆಮಿಷವೊಡ್ಡುತ್ತಿದೆ ಇದರಲ್ಲಿ ಬಿಜೆಪಿ ಉನ್ನತ ನಾಯಕರು ಶಾಮೀಲಾಗಿದ್ದಾರೆ ಎಂದು ವೇಣುಗೋಪಾಲ ಆಪಾದಿಸಿದಾಗ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಕುದುರೆ ವ್ಯಾಪಾರ ಎಂದು ಘೋಷಣೆ ಇದ್ದ ಫಲಕಗಳನ್ನು ಹಿಡಿದು ಸ್ಪೀಕರ್ ಪೀಠದ ಮುಂದಿನ ಸ್ಥಳಕ್ಕೆ ಧಾವಿಸಿ ಪ್ರತಿಭಟನೆ ನಡೆಸಿದರು. ಇದಕ್ಕೆ ಟಿಡಿಪಿ ಮತ್ತು ಟಿಎಂಸಿ ಸದಸ್ಯರು ಬೆಂಬಲ ನೀಡಿದರು.

ಸದನದಲ್ಲಿ ಗದ್ದಲ-ಕೋಲಾಹಲ ವಾತಾವರಣ ನಿರ್ಮಾಣವಾದರಿಂದ ಸ್ಪೀಕರ್ ಸುಮಿತ್ರ ಮಹಾಜನ್ ಮಧ್ಯಾಹ್ನ 12ಗಂಟೆ ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗಲೂ ಇದೇ ಪರಿಸ್ಥಿತಿ ಮುಂದುವರೆದ ಕಾರಣ ಕಲಾಪವನ್ನು ಮಧ್ಯಾಹ್ನ 2.15ಕ್ಕೆ ಮುಂದೂಡಲಾಯಿತು.

Facebook Comments