ಆಡಿಯೋ ಪ್ರಕರಣದಿಂದ ಸದನದ ಹಕ್ಕುಚ್ಯುತಿ : ಕೃಷ್ಣಬೈರೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Krishnaಬೆಂಗಳೂರು, ಫೆ.11- ಆಪರೇಷನ್ ಕಮಲಕ್ಕೆ ಸಿಲುಕಿರುವ ಕಾಂಗ್ರೆಸ್-ಜೆಡಿಎಸ್‍ನ ಶಾಸಕರ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ 50 ಕೋಟಿ ಡೀಲ್‍ಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಇರುವ ಆಡಿಯೋದಿಂದ ಸದನದ ಹಕ್ಕುಚ್ಯುತಿ ಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ವಾದಿಸಿದರು.

ಆದರೆ, ಇದು ಹಕ್ಕುಚ್ಯುತಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಪ್ರತಿವಾದಿಸಿದರು. ಆಡಿಯೋದಲ್ಲಿ ಪ್ರಸ್ತಾಪಿಸಿರುವಂತೆ ಹಣಕಾಸು ವ್ಯವಹಾರ ನಡೆದಿದೆ. ಇದು ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ಒಳಪಡುತ್ತದೆ ಎಂದು ಕೃಷ್ಣಬೈರೇಗೌಡ ಹೇಳಿದರು.

ಸ್ಪೀಕರ್ ರಮೇಶ್‍ಕುಮಾರ್ ಅವರು ವಿಧಾನಸಭೆ ಯಲ್ಲಿ ಆಡಿಯೋ ಬಗ್ಗೆ ಸ್ವಯಂ ಪ್ರೇರಿತ ಪ್ರಸ್ತಾಪ ಮಾಡಿ ತಮ್ಮ ಅನಿಸಿಕೆ ಹೇಳಿದ ನಂತರ ಎದ್ದು ನಿಂತ ಸಚಿವ ಕೃಷ್ಣಬೈರೇಗೌಡ ಅವರು, ಇದು ರಮೇಶ್‍ಕುಮಾರ್ ಅವರ ವೈಯಕ್ತಿಕ ವಿಷಯ ಅಲ್ಲ. ಈ ಸದನದ ಗೌರವ, ಘನತೆಯ ಪ್ರಶ್ನೆ. ಸುಳ್ಳು ಆರೋಪ ಮಾಡಿರುವುದು ಸದನದ ಹಕ್ಕುಚ್ಯುತಿಯಾಗಿದೆ.

ಆರೋಪ ಮಾಡಿರುವವರು ಜವಾಬ್ದಾರಿಯುತರೇ ಅಥವಾ ಹಾದಿ ಬೀದಿಯಲ್ಲಿ ಹೋಗುವವರೇ ಎಂಬುದು ಪತ್ತೆಯಾಗಬೇಕು.ಹಾದಿಬೀದಿಯಲ್ಲಿ ಹೋಗುವವರು ಮಾತನಾಡಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ವಾಕ್ ಸ್ವಾತಂತ್ರ್ಯದಿಂದಾಗಿ ಜನಸಾಮಾನ್ಯರು ಸರ್ಕಾರವನ್ನು ಟೀಕಿಸುತ್ತಾರೆ.

ಆದರೆ, ಜವಾಬ್ದಾರಿಯುತ ಸಂವಿಧಾನಾತ್ಮಕ ಸ್ಥಾನದಲ್ಲಿರುವವರು ಮಾತನಾಡಿದ್ದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಸ್ಪೀಕರ್ ಅವರ ಗುಣ, ನಡತೆಗಳನ್ನು ಪ್ರಶ್ನೆ ಮಾಡುವುದು ಸದನದ ಹಕ್ಕುಚ್ಯುತಿಯಾಗುತ್ತದೆ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಪ್ರತಿ ವಾದ ಮಾಡಿದ ಜೆ.ಸಿ.ಮಾಧುಸ್ವಾಮಿ ಅವರು, ಸದನದ ಹೊರಗೆ ಮಾತನಾಡಿದ್ದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಅದು ಸದನದ ಹಕ್ಕುಚ್ಯುತಿ ಆಗುವುದಿಲ್ಲ.

ಸದನದ ಒಳಗೆ ನಡೆದಿರುವ ಘಟನೆಗಳಾದರೆ ಅದು ಹಕ್ಕುಚ್ಯುತಿಯಾಗುತ್ತದೆ. ಆದರೆ, ಸ್ಪೀಕರ್ ಅವರ ಹುದ್ದೆಯ ಬಗ್ಗೆ ಮಾತನಾಡುವುದನ್ನು ನಾವೂ ಕೂಡ ಸಹಿಸುವುದಿಲ್ಲ. ಈಗಾಗಲೇ ಆಡಿಯೋದಲ್ಲಿರುವ ಮಾತುಕತೆಗಳಿಗೆ ಕ್ಷಮೆ ಕೇಳುತ್ತೇವೆ. ತಪ್ಪಾಗಿದೆ ಅದನ್ನು ಇಷ್ಟಕ್ಕೆ ಬಿಟ್ಟುಬಿಡಿ ದೊಡ್ಡದು ಮಾಡಬೇಡಿ.

ಯಾರೋ ಹಾದಿಬೀದಿಯಲ್ಲಿ ಮಾತನಾಡಿದ್ದನ್ನು ಇಲ್ಲಿ ತಂದು ಚರ್ಚೆ ಮಾಡಿ ನೀವು ಭಾವನಾತ್ಮಕವಾಗಿ ಉದ್ವೇಗಕ್ಕೊಳಗಾಗುವ ಅಗತ್ಯವಿಲ್ಲ. ಅಂತಹ ಮಾತುಗಳನ್ನು ಕೇಳಿ ನೀವು ಹುದ್ದೆಯಿಂದ ಎದ್ದು ಹೋದರೆ ಆರೋಪಗಳನ್ನು ಹೊತ್ತಿಕೊಂಡಂತಾಗುತ್ತದೆ. ನೀವು ಅಂತಹ ನಿರ್ಧಾರ ಮಾಡಬೇಡಿ. ಬೇಕಿದ್ದರೆ ಯಾವುದೇ ರೀತಿಯ ತನಿಖೆಗೆ ಒಪ್ಪಿಸಿ, ಅದಕ ನಮ್ಮೆಲ್ಲರ ಒಪ್ಪಿಗೆ ಇದೆ ಎಂದರು.

ಇದು ಹಕ್ಕುಚ್ಯುತಿ ವ್ಯಾಪ್ತಿಗೆ ಒಳಪಡುತ್ತದೆಯೇ ಇಲ್ಲವೇ ಎಂಬುದು ಮಾಧುಸ್ವಾಮಿ ಹಾಗೂ ಕೃಷ್ಣಬೈರೇಗೌಡ ನಡುವೆ ಸುದೀರ್ಘ ಚರ್ಚೆಗೆ ಒಳಪಟ್ಟಿತು.

Facebook Comments