ಎಸ್‍ಐಟಿ ತನಿಖೆಯಿಂದ ಆಡಿಯೋ ಸತ್ಯಾಂಶ ಹೊರಬರಲ್ಲ ಎಂದು ಮಾಧುಸ್ವಾಮಿ ವಾದ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.12- ಆಪರೇಷನ್ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸುವುದರಿಂದ ಸತ್ಯಾಂಶ ಹೊರ ತರುವ ಮೂಲ ಉದ್ದೇಶ ಈಡೇರುವುದಿಲ್ಲ ಎಂದು ಬಿಜೆಪಿಯ ಹಿರಿಯ ಶಾಸಕ ಜೆ.ಸಿ.ಮಾಧುಸ್ವಾಮಿ ವಾದಿಸಿದರು.

ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಮಾತು ಆರಂಭಿಸಿದ ಮಾಧುಸ್ವಾಮಿ, ಇಬ್ಬರ ನಡುವೆ ನಡೆದಂತಹ ಮಾತುಕತೆಯನ್ನು ಬಹಿರಂಗ ಪಡಿಸುವ ಮೂಲಕ ನಿಮ್ಮ ಹೆಸರನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ.

ನಾಲ್ಕು ಗೋಡೆಗಳ ಮಧ್ಯೆ ಸಭೆ ಮಾಡಿ ಚರ್ಚಿಸಬಹುದಿತ್ತು. ಅಥವಾ ನಿಮ್ಮೊಂದಿಗೆ ಗುಪ್ತ ಸಭೆ ನಡೆಸಬಹುದಿತ್ತು. ಅದನ್ನು ಬಿಟ್ಟು ಬಹಿರಂಗಗೊಳಿಸಿದ್ದರ ಹಿನ್ನೆಲೆ ಏನು ಎಂದು ಪ್ರಶ್ನಿಸಿದರು.

ಕ್ರಿಮಿನಲ್ ಪ್ರಾಸಿಕ್ಯೂಷನ್ ಹಿನ್ನೆಲೆಯಲ್ಲಿ ಎಸ್‍ಐಟಿ ರಚಿಸಲಾಗಿದೆ. ಹಾಗಿದ್ದರೆ ಎಸ್‍ಐಟಿಗೆ ದೂರು ಕೊಡುವವರು ಯಾರು, ನೀವಾಗಲಿ, ಮುಖ್ಯಮಂತ್ರಿಯಾಗಲಿ ದೂರು ಕೊಡಲು ಸಾಧ್ಯವೇ, ನೀವು ಹೋಗಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲು ಸಾಧ್ಯವೆ ಎಂದು ಪ್ರಶ್ನಿಸಿದರಲ್ಲದೆ, ದೂರು ಕೊಟ್ಟ ಮೇಲೆ ಎಫ್‍ಐಆರ್ ದಾಖಲಿಸಬೇಕು.

ಅನಂತರ ಪ್ರಕರಣ ನ್ಯಾಯಾಲಯದ ಮುಂದೆ ಹೋಗುತ್ತದೆ. ನ್ಯಾಯಾಲಯ ವಿಚಾರಣೆಯ ಸಂಪೂರ್ಣ ಮೇಲುಸ್ತುವಾರಿ ನೋಡುತ್ತದೆ. ನೀವಾಗಲಿ, ಸಿಎಂ ಆಗಲಿ ಎಸ್‍ಐಟಿ ವಿಚಾರಣೆಯ ದೋಷಾರೋಪ ಪಟ್ಟಿಯನ್ನೂ ನೋಡಲು ಸಾಧ್ಯವಿಲ್ಲ ಎಂದು ಹೇಳಿದರು.

ಆಡಿಯೋದಲ್ಲಿ ನಿಮ್ಮ ಬಗ್ಗೆ ಕೇಳಿ ಬಂದಿರುವ ಮಾತಿನ ಸತ್ಯಾಸತ್ಯತೆಯನ್ನು ಪತ್ತೆಹಚ್ಚುವುದು ನಿಮ್ಮ ಮೂಲ ಉದ್ದೇಶವಾಗಿದ್ದರೆ ಅದು ಎಸ್‍ಐಟಿ ತನಿಖೆಯಿಂದ ಈಡೇರುವುದಿಲ್ಲ. ಇದರಲ್ಲಿ ರಾಜಕಾರಣ ಮಾಡುವುದು ಬೇಡ.

ಎಸ್‍ಐಟಿ ಎಂದರೆ ಅದು ಪೊಲೀಸ್ ಅಧಿಕಾರಿಗಳ ತಂಡ. ಶಾಸಕರನ್ನು ಕ್ರಿಮಿನಲ್ ಪ್ರಾಸಿಕ್ಯೂಷನ್ ಕೈಗೆ ಕೊಟ್ಟು ಕಿರುಕುಳ ಅನುಭವಿಸುವಂತೆ ಮಾಡಬೇಡಿ. ಎಸ್‍ಐಟಿ ತನಿಖೆಗೆ ನಾವು ಸಹಕರಿಸದೇ ಇರಬಹುದು. ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಬಹುದು.

ಎಸ್‍ಐಟಿ ಅಧಿಕಾರಿಗಳು ಕೇಸು ದಾಖಲಿಸಿದಾಗ ನ್ಯಾಯಾಲಯದಿಂದ ಜಾಮೀನು ಪಡೆಯಬಹುದು. ಜಾಮೀನು ಸಿಕ್ಕ ಮೇಲೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗದೆ ನಾನು ನ್ಯಾಯಾಲಯದಲ್ಲೇ ಹೇಳಬೇಕಾದದ್ದನ್ನು ಹೇಳುತ್ತೇನೆ ಎಂದು ಉಳಿಯಬಹುದು.

ಸಮನ್ಸ್ ಕೊಟ್ಟ ತಕ್ಷಣ ವಿಚಾರಣೆಗೆ ಹೋಗದೇ ಇರಬಹುದು. ನಾನಾ ರೀತಿಯ ಅಡ್ಡಿಗಳು ಎದುರಾಗುತ್ತವೆ. 15 ದಿನಗಳಲ್ಲಿ ಸತ್ಯಾಂಶ ಪತ್ತೆ ಹಚ್ಚುವ ನಿಮ್ಮ ಉದ್ದೇಶ ಎಸ್‍ಐಟಿ ತನಿಖೆಯಿಂದ ಈಡೇರುವುದಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರು ಎಸ್‍ಐಟಿ ರಚಿಸಿದಾಗ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿರುವ ಉದಾಹರಣೆ ಇದೆ. ಅದರ ಎಸ್‍ಐಟಿ ತನಿಖೆ ಈವರೆಗೂ ಆರಂಭವಾಗಿಲ್ಲ ಎಂದರು.

ಕೆಪಿಟಿಸಿಎಲ್ ಸೊಸೈಟಿ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡಿ ಪೊಲೀಸರ ತನಿಖಾ ವರದಿಯನ್ನು ಸರ್ಕಾರ ನೋಡುವ ಅಗತ್ಯ ಇಲ್ಲ ಎಂದು ವರದಿ ನೀಡಿದೆ. ಹೀಗಾಗಿ ಎಸ್‍ಐಟಿ ತನಿಖೆ ಶುರುವಾದರೆ ಪೊಲೀಸರು ಸರ್ಕಾರಕ್ಕೆ ವರದಿ ನೀಡುವುದಿಲ್ಲ.

ನ್ಯಾಯಾಲಯಕ್ಕೆ ನೀಡುತ್ತಾರೆ. ಪೊಲೀಸರ ಕೈಗೆ ಆಯುಧ ಕೊಟ್ಟು ನಮ್ಮನ್ನು ಬಲಿಪಶುಮಾಡಬೇಡಿ. ನಿಮ್ಮ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ನಿಮ್ಮ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸಿಲ್ಲ. ಆಡಿಯೋದಲ್ಲಿ ಏನೋ ತಪ್ಪಾಗಿದೆ. ಅದಕ್ಕಾಗಿ ನಾವು ಕ್ಷಮೆಯನ್ನೂ ಕೇಳಿದ್ದೇವೆ.

ದಯವಿಟ್ಟು ನಿಮ್ಮ ಕಾಲದಲ್ಲಿ ಶಾಸಕರನ್ನು ಪೊಲೀಸರ ಕಿರುಕುಳಕ್ಕೊಳಗಾಗುವಂತೆ ಮಾಡಬೇಡಿ. ಇಲ್ಲಿರುವ ಶೇ.60ರಷ್ಟು ಶಾಸಕರು ಪೊಲೀಸರ ಕಿರುಕುಳ ಅನುಭವಿಸಿದವರಾಗಿದ್ದಾರೆ. ನಾವು ಈಗಾಗಲೇ ಕ್ಷಮೆ ಕೇಳಿರುವುದರಿಂದ ಪ್ರಕರಣವನ್ನು ದೊಡ್ಡದು ಮಾಡದೆ ಇಲ್ಲಿಗೆ ಬಿಟ್ಟುಬಿಡಿ. ತನಿಖೆ ಅನಿವಾರ್ಯವಾದರೆ ಎಸ್‍ಐಟಿ ಬದಲಾಗಿ ಸದನ ಸಮಿತಿ ಅಥವಾ ಶಿಷ್ಟಾಚಾರ ಸಮಿತಿಗೆ ಒಪ್ಪಿಸಿ. ನಿಮ್ಮ ನೇತೃತ್ವದಲ್ಲೇ ತನಿಖೆಯಾಗಲಿ ಎಂದು ಹೇಳಿದರು.

ಈವತ್ತಿನ ಅಜೆಂಡಾ ಕಾಪಿ ನೋಡಿದರೆ ಪ್ರಶ್ನೋತ್ತರವನ್ನು ಬದಿಗಿರಿಸಲಾಗಿದೆ. ಹಲವಾರು ಮಸೂದೆಗಳನ್ನು ಮಂಡಿಸಲಾಗುತ್ತಿದೆ. ಮೊದಲು ಬಜೆಟ್ ಅಂಗೀಕಾರ, ನಂತರ ರಾಜ್ಯಪಾಲರ ಮೇಲಿನ ಭಾಷಣದ ವಂದನಾ ನಿರ್ಣಯ ಸೇರಿದಂತೆ ಹಲವಾರು ಅಜೆಂಡಾಗಳಿವೆ. ಆತುರಾತುರವಾಗಿ ಕಲಾಪವನ್ನು ಮುಗಿಸಬಹುದು ಎಂಬ ಆತಂಕ ಕಾಡುತ್ತಿದೆ. ಬಜೆಟ್ ಮೇಲೆ ಚರ್ಚೆಯಾಗಬೇಕಿದೆ. ಅಧಿವೇಶನವನ್ನು ಮೊಟಕುಗೊಳಿಸಬೇಡಿ ಎಂದು ಮಾಧುಸ್ವಾಮಿ ಮನವಿ ಮಾಡಿದರು.

Facebook Comments

Sri Raghav

Admin