ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ 7ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಬೆಂಗಳೂರು, ಫೆ.12- ಏಳು ತಿಂಗಳ ಮಗುವಿನ ಕರುಳಿನಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ನಿವಾರಿಸುವಲ್ಲಿ ಸಕ್ರ ವಲ್ರ್ಡ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
ಹಿಮೊಗ್ಲೋಬಿನ್ ಪ್ರಮಾಣ 2 ಗ್ರಾಂನಷ್ಟಿದ್ದು, ರಕ್ತಹೀನತೆಯ ಸಮಸ್ಯೆಯನ್ನು ಎದುರಿಸುತ್ತಿದ್ದ ಮಗುವನ್ನು ವೈದ್ಯರು ಆರಂಭದಲ್ಲಿ ಪರೀಕ್ಷೆ ನಡೆಸಿದಾಗ ಜಠರದಲ್ಲಿ ಸಮಸ್ಯೆ ಇರುವುದು ಕಂಡುಬಂದಿತ್ತು.
ಇದನ್ನು ನಿವಾರಿಸುವುದು ಸವಾಲಿನ ಕೆಲಸವಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಪರೀಕ್ಷೆ ನಡೆಸಿದ ನಂತರ ಕೂಡೇ ಶಸ್ತ್ರಚಿಕಿತ್ಸೆ ನಡೆಸದಿದ್ದರೆ ಮಗುವಿನ ಪ್ರಾಣಕ್ಕೆ ಅಪಾಯ ಬರುವ ಸ್ಥಿತಿ ನಿರ್ಮಾಣವಾಗಿತ್ತು.
ಕೂಡಲೇ ಕರುಳಿನ ಭಾಗದಲ್ಲಿ ಹೆಚ್ಚುವರಿಯಾಗಿ ಬೆಳೆದಿದ್ದ ಮಾಂಸಕಂಡವನ್ನು ಶಸ್ತ್ರಚಿಕಿತ್ಸೆ ನಡೆಸಿ ತೆಗೆಯಲಾಗಿದೆ.ಇದೊಂದು ಕ್ಲಿಷ್ಟ ಸಮಸ್ಯೆ. ಸಾಮಾನ್ಯವಾಗಿ ಮಗುವಿನಲ್ಲಿ ಇಂತಹ ಬೆಳವಣಿಗೆಗಳು ಕಂಡುಬರುವುದಿಲ್ಲ.
ಆದರೆ, ನಾವೊಂದು ಸವಾಲನ್ನು ಸ್ವೀಕರಿಸಿ ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಿದ್ದೇವೆ ಎಂದು ಡಾ.ರವಿಕಿರಣ್ ಡಾ.ಶಿಶಿರ್ ಚಂದ್ರಶೇಖರ್, ಡಾ.ರಾಮಚಂದ್ರ ತಿಳಿಸಿದ್ದಾರೆ.
ಕಳೆದ ಹತ್ತು ದಿನಗಳಿಂದ ಸೂಕ್ಷ್ಮವಾಗಿ ಗಮನಿಸಿ ಆರೈಕೆ ನೀಡಿರುವುದರಿಂದ ಈ ಮಗು ಸಾಮಾನ್ಯ ಸ್ಥಿತಿಗೆ ಬಂದಿದೆ. ಪೋಷಕರು ಕೂಡ ಖುಷಿಯಾಗಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.