ಪರಿಷತ್‍ನಲ್ಲಿ ಕೋಲಾಹಲವೆಬ್ಬಿಸಿದ ಕುಡಿಯುವ ನೀರಿನ ಘಟಕದ ಅವ್ಯವಹಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.12- ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ನೂರು ಕೋಟಿ ರೂ.ಗಳ ದುರುಪಯೋಗವಾಗಿದೆ. ಈ ಬಗ್ಗೆ ತನಿಖೆಗಾಗಿ ಸದನ ಸಮಿತಿ ರಚಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ ದಾಗ ಮೇಲ್ಮನೆಯಲ್ಲಿ ಗದ್ದಲ,
ಕೋಲಾಹಲ ಉಂಟಾಗಿ ಕಲಾಪವನ್ನು ಕೆಲ ಕಾಲ ಮುಂದೂಡಿದ ಪ್ರಸಂಗ ನಡೆಯಿತು.

ಪ್ರಶ್ನೋತ್ತರ ಕಲಾಪ ಸಂದರ್ಭದಲ್ಲಿ ಬಿಜೆಪಿ ಸದಸ್ಯ ರಘುನಾಥ್ ಮಲ್ಕಾಪುರೆ ಅವರು ಕೇಳಿದ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಅವರು, ರಾಜ್ಯದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸಂಬಂಧ ನೀಡಿದ ವಿವರಗಳಿಗೆ ತೃಪ್ತರಾಗದ ಬಿಜೆಪಿ ಸದಸ್ಯರು, ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸಾಕಷ್ಟು ಅವ್ಯವಹಾರಗಳಾಗಿವೆ.

ನೂರಾರು ಕೋಟಿ ರೂ.ಗಳು ದುರುಪಯೋಗವಾಗಿವೆ. ಸದನ ಸಮಿತಿ ರಚಿಸಬೇಕೆಂದು ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಮಧ್ಯ ಪ್ರವೇಶಿಸಿದ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು, ಪ್ರತಿಪಕ್ಷದ ಸದಸ್ಯರ ವಿರುದ್ಧ ಗರಂ ಆದರು.

ಇಷ್ಟು ದಿವಸ ಸದನ ಹಾಳು ಮಾಡಿರುವುದು ಸಾಲದೆ? ಏನಿದು ಮತ್ತೆ ಈ ರೀತಿ ಪ್ರತಿಭಟನೆ ಮಾಡುವುದು, ಸಭೆ ನಡೆಸುವುದು ಬೇಡವೆ? ನೀವು ಹೇಳಿದ ಹಾಗೆ ಉತ್ತರ ಕೊಡಬೇಕೆ? ಏನ್ರಿ ಇದು ಎಂದು ರೇಗಿದರು.

ಇದಕ್ಕೂ ಮುನ್ನ ಉತ್ತರ ನೀಡಿದ ಸಚಿವ ಕೃಷ್ಣಬೈರೇಗೌಡ ಅವರು, ರಾಜ್ಯದಲ್ಲಿ 18,582 ಶುದ್ಧ ಕುಡಿಯುವ ನೀರು ಘಟಕಗಳ ಮಂಜೂರಾತಿ ಪಡೆದಿದ್ದು, 16,116 ಘಟಕಗಳನ್ನು ಸ್ಥಾಪಿಸಲಾಗಿದೆ. 576 ಘಟಕಗಳು ಕೆಟ್ಟಿವೆ.

ಅವುಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಜಲ ತಜ್ಞ ರಾಜಾರಾಮ್ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ಮಾಡಲಾಗಿದ್ದು, ಅಲ್ಲಿಂದ ವರದಿ ಬಂದ ನಂತರ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಕ್ರಮ ವಹಿಸುತ್ತೇವೆ ಎಂದರು.

ಪ್ರತಿಭಟನಾ ನಿರತ ಸದಸ್ಯರ ವಿರುದ್ಧ ಹರಿಹಾಯ್ದ ಸಚಿವರು, ಸದನ ಸಮಿತಿ ಮೂಲಕ ಸರ್ಕಾರ ನಡೆಸಲು ಆಗುವುದಿಲ್ಲ. ಈಗಾಗಲೇ ನಾಲ್ಕೈದು ದಿನ ಕಲಾಪ ನಡೆದಿಲ್ಲ. ಬಿಜೆಪಿ ಸದಸ್ಯರಿಗೆ ಅಧಿವೇಶನ ನಡೆಸುವ ಆಸಕ್ತಿ ಇಲ್ಲ ಎಂದು ರೇಗಿದರು.

ಪ್ರತಿಭಟನಾ ನಿರತ ಬಿಜೆಪಿ ಸದಸ್ಯರು ತಮ್ಮ ಪಟ್ಟು ಸಡಿಲಿಸದೆ ಗದ್ದಲ ಮುಂದುವರೆಸಿದ ಹಿನ್ನೆಲೆಯಲ್ಲಿ ಸಭಾಪತಿಯವರು ಸದನವನ್ನು ಒಂದು ಗಂಟೆಯವರೆಗೆ ಮುಂದೂಡಿದರು.

Facebook Comments

Sri Raghav

Admin