ಮೇಲ್ಮನೆಯಲ್ಲಿ ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ಆಡಿಯೋ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.12- ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬ ಧೋರಣೆ, ಆಡಳಿತ ಪಕ್ಷದ ಆರೋಪ, ಪ್ರತಿಪಕ್ಷದ ಆಕ್ಷೇಪ ಮೇಲ್ಮನೆಯಲ್ಲಿ ಮಾರ್ಧನಿಸಿ ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಆರ್.ಪ್ರಸನ್ನಕುಮಾರ್ ಅವರ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಅವರು ಉತ್ತರ ನೀಡಿ, ಉದ್ಯೋಗ ಖಾತ್ರಿಯೋಜನೆಯಲ್ಲಿ ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವ ಮೊತ್ತದ ವಿವರವನ್ನು ಸದನಕ್ಕೆ ನೀಡಿದ್ದು, ಪ್ರತಿಪಕ್ಷ ಬಿಜೆಪಿಯ ಆಕ್ಷೇಪಕ್ಕೆ ಕಾರಣವಾಗಿ ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು.

ನಿಗದಿಯಂತೆ ಕೇಂದ್ರ ಸರ್ಕಾರದಿಂದ ಹಣ ಪಾವತಿಯಾಗುತ್ತಿಲ್ಲ. 2049 ಕೋಟಿ ಈ ಯೋಜನೆಯಡಿಯಲ್ಲಿ ಹಣ ಬಾಕಿ ಬರಬೇಕಿತ್ತು. ಕೇವಲ 117 ಕೋಟಿ ಪಾವತಿ ಮಾಡಿದ್ದಾರೆ. ಕೇಂದ್ರದಿಂದ ಅನುದಾನ ಬರದಿದ್ದರೂ ರಾಜ್ಯ ಸರ್ಕಾರ 900 ಕೋಟಿ ರೂ.ಗಳನ್ನು ಭರಿಸುತ್ತಿದೆ ಎಂದರು.

ಆಗ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್‍ಪೂಜಾರಿ ಆಕ್ಷೇಪ ವ್ಯಕ್ತಪಡಿಸಿ, ಪ್ರಸ್ತಾಪವನ್ನು ಕರಾರುವಕ್ಕಾಗಿ ಕೊಟ್ಟಿಲ್ಲ. ಅದಕ್ಕಾಗಿ ವಿಳಂಬವಾಗಿರಬಹದು. ಅನಗತ್ಯವಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ.

ಕೇಂದ್ರ ಸರ್ಕಾರದ ಅನುದಾನ ವಿಳಂಬವಾದರೆ ರಾಜ್ಯ ಸರ್ಕಾರ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಸಾಮಾನ್ಯ. ಅದರಲ್ಲಿ ವಿಶೇಷವಿಲ್ಲ ಎಂದು ಹೇಳಿದರು.

ಆಗ ಎದ್ದು ನಿಂತ ಡಿ.ಕೆ.ಶಿವಕುಮಾರ್, ಬಡವರ ತಲೆಯ ಮೇಲೆ ಏಕೆ ಕಲ್ಲು ಹೊಡೆಯುತ್ತಿದ್ದೀರಿ? ಕೂಲಿ ಮಾಡಿದ ಹಣವನ್ನು ಬಿಡುಗಡೆ ಮಾಡಿ ಸ್ವಾಮಿ, ಹೇಳಿ ನಿಮ್ಮ ಕೇಂದ್ರ ಸರ್ಕಾರಕ್ಕೆ ಎಂದರು.

ಈ ಸಂದರ್ಭದಲ್ಲಿ ತೇಜಸ್ವಿನಿ ರವಿಕುಮಾರ್ ಸೇರಿದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಆರೋಪ -ಪ್ರತ್ಯಾರೋಪಗಳಲ್ಲಿ ವಾಸ್ತವತೆ ಮರೆ ಮಾಚುವುದು ಬೇಡ.

ರಾಜ್ಯಕ್ಕೆ 2049 ಕೋಟಿ ಬಾಕಿ ಬರಬೇಕಾಗಿದೆ. ಆದರೂ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಬಡ, ಕೂಲಿ ಕಾರ್ಮಿಕರಿಗೆ ತೊಂದರೆಯಾಗದಂತೆ 900 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ದೇಶಾದ್ಯಂತ 12,713 ಕೋಟಿ ರೂ. ಬಾಕಿ ಬರಬೇಕಿದೆ ಎಂದರು. ಈ ಸಂದರ್ಭದಲ್ಲೂ ಕೂಡ ಮಾತಿನ ಚಕಮಕಿ ನಡೆಯಿತು.

Facebook Comments

Sri Raghav

Admin