ಆಪರೇಷನ್ ಆಡಿಯೋ : ಸದನ ಸಮಿತಿಯಿಂದ ತನಿಖೆಗೆ ರಾಮುಲು ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.12-ವಿವಾದಿತ ಧ್ವನಿಸುರುಳಿಯ ಬಗ್ಗೆ ನ್ಯಾಯಾಂಗ ಇಲ್ಲವೇ ಸದನ ಸಮಿತಿಯಿಂದ ತನಿಖೆಯಾಗಬೇಕು ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ವಿಧಾನಸಭೆಯಲ್ಲಿ ಒತ್ತಾಯಿಸಿದರು.

ಕೆ.ಜಿ.ಬೋಪಯ್ಯ ಅವರು ವಿಧಾನಸಭಾಧ್ಯಕ್ಷರಾಗಿದ್ದ ಅವಧಿಯಿಂದ ಇಲ್ಲಿಯವರೆಗೂ ಎಲ್ಲಾ ಪ್ರಕರಣಗಳು ತನಿಖೆಯಾಗಲಿ. ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೂಡ ಸೇರಿಸಬೇಕು ಎಂದು ಒತ್ತಾಯಿಸಿದರು.

ಸಭಾಧ್ಯಕ್ಷರು ಪ್ರಾಮಾಣಿಕ ರಾಜಕಾರಣಿ ಎಂಬುದನ್ನು ತಾವು ರಾಜಕೀಯಕ್ಕೆ ಬರುವ ಮೊದಲೇ ಹೇಳಿದ್ದೆ. ಆದರೆ, ಧ್ವನಿಸುರುಳಿ ವಿಚಾರದಲ್ಲಿ ಸಭಾಧ್ಯಕ್ಷರ ಹೆಸರನ್ನು ಹೊರಗೆ ತಂದಿದ್ದಾರೆ. ಆರೋಪ ಬಂದಾಗ ನೋವಾಗುವುದು ಸಹಜ.

ಧ್ವನಿಸುರುಳಿ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಳಪಡಿಸುವುದು ಸರಿಯಲ್ಲ. ಅದು ಮುಖ್ಯಮಂತ್ರಿಯವರ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ ನ್ಯಾಯಾಧೀಶರಿಂದ ತನಿಖೆಯಾಗಬೇಕು. ಇಲ್ಲವೇ ಸದನ ಸಮಿತಿಯಿಂದ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಸದನ ಸಮಿತಿಗೆ ಆಗ್ರಹ: ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಧ್ವನಿಸುರುಳಿ ಪ್ರಕರಣವನ್ನು ಸದನ ಸಮಿತಿಗೆ ವಹಿಸಬೇಕು. ಪೊಲೀಸ್ ಅಧಿಕಾರಿಗೆ ತನಿಖೆ ಜವಾಬ್ದಾರಿ ಕೊಡುವುದು ಸರಿಯಲ್ಲ.

ತಮ್ಮ ಮೇಲೆ ಇರುವ ಆಪಾದನೆಯನ್ನು ಇಡೀ ಸದನ ನಿನ್ನೆಯೇ ಅಲ್ಲಗಳೆದಿದೆ. ಆರೋಪದ ಕಳಂಕವನ್ನೂ ಹೋಗಲಾಡಿಸಿದೆ. ಸಭಾಧ್ಯಕ್ಷರಿಗೆ ಲಿಖಿತ ರೂಪದಲ್ಲಿ ಪತ್ರ ಕೊಟ್ಟವರು ಯಾರು? ಅವರ ಅಧೀನದಲ್ಲಿ ಬರುವ ಎಸ್‍ಐಟಿ ತನಿಖೆಗೆ ವಹಿಸಿದರೆ ಸ್ವಾಭಾವಿಕ ನ್ಯಾಯ ಸಿಗಲಿದೆಯೇ ಎಂದು ಪ್ರಶ್ನಿಸಿದರು.

ಇಬ್ಬರ ನಡುವೆ ಆಗಿರುವ ಸಂಭಾಷಣೆ ಹೊರಗಡೆ ತಂದಿದ್ದು ಯಾರು? ತುರ್ತು ಪತ್ರಿಕಾಗೋಷ್ಠಿ ನಡೆಸಿ ಮೊದಲ ಬಾರಿ ತಮ್ಮ ಹೆಸರು ಪ್ರಸ್ತಾಪಿಸಿದ್ದು ಯಾರು? ಧ್ವನಿಸುರುಳಿ ಬಿಡುಗಡೆ ಮಾಡಿದ್ದು ಯಾರು? ಈ ವಿಚಾರವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸದೆ ತಮ್ಮ ಕೊಠಡಿಯಲ್ಲಿ ಚರ್ಚೆ ಮಾಡಬಹುದಿತ್ತು.

ಅದನ್ನು ಬಿಟ್ಟು ಬಹಿರಂಗಗೊಳಿಸಿದ್ದು ಕ್ರಮವಲ್ಲ, ಮುಖ್ಯಮಂತ್ರಿ ಅಧೀನದಲ್ಲಿ ಬರುವ ಸಂಸ್ಥೆಗೆ ತನಿಖೆ ಹೊಣೆ ಹೊರಿಸುವುದು ಸರಿಯಲ್ಲ. ಇಡೀ ಸದನ ಸಭಾಧ್ಯಕ್ಷರ ಪರ ಇದೆ. ಎಸ್‍ಐಟಿ ತನಿಖೆ ವ್ಯಾಪ್ತಿಗೆ ತರಬಾರದು ಎಂದು ಸಲಹೆ ಮಾಡಿದರು.

Facebook Comments