ರುಚಿ ಇಲ್ಲದ ಊಟ, ಇಂದಿರಾ ಕ್ಯಾಂಟೀನ್ ಕಡೆ ತಲೆ ಹಾಕುತ್ತಿಲ್ಲ ಜನ..!

ಈ ಸುದ್ದಿಯನ್ನು ಶೇರ್ ಮಾಡಿ

– ದೇವಿ ಮಂಜುನಾಥ್, ಗೌರಿಬಿದನೂರು
ಗೌರಿಬಿದನೂರು, ಫೆ.12- ಬಡವರ ಪಾಲಿನ ಅಕ್ಷಯ ಪಾತ್ರೆ ಎಂದೇ ಬಿಂಬಿಸಲಾಗಿದ್ದ ಇಂದಿರಾ ಕ್ಯಾಂಟೀನ್ ತಿಂಡಿ-ಊಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರುಚಿ ಕಳೆದುಕೊಂಡಿದ್ದು ಕ್ಯಾಂಟೀನ್ ಗೆ ಬರುವ ಗ್ರಾಹಕರ ಸಂಖ್ಯೆ ಇಳಿಮುಖದತ್ತ ಸಾಗಿದೆ.

ರಾಜ್ಯ ಸರ್ಕಾರ ಬಡವರ ಹಸಿವನ್ನು ನೀಗಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿರುವುದು ಸರಿಯಷ್ಟೆ. ಆದರೆ ಇತ್ತೀಚಿನ ದಿನಗಳಲ್ಲಿ ಕ್ಯಾಂಟೀನ್‍ನ ತಿಂಡಿ-ಊಟ ರುಚಿ ಕಳೆದುಕೊಳ್ಳುತ್ತಿರುವುದರಿಂದ ಗ್ರಾಹಕರು ಮತ್ತೆ ಖಾಸಗಿ ಹೊಟೇಲ್‍ಗಳಿಗೆ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ.

ಹೀಗಿದ್ದ ಮೇಲೆ ಯಾವ ಪುರುಷಾರ್ಥಕ್ಕಾಗಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಬೇಕು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ..!

ಕಳೆದ ಗಣರಾಜ್ಯೋತ್ಸವದಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹಾಗೂ ಸಂಸದ ಡಾ.ಎಂ.ವೀರಪ್ಪಮೊಯ್ಲಿರವರು ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಮಾಡಿದ್ದರು. ಇದರಿಂದ ಹಸಿದ ಹೊಟ್ಟೆಗೆ ಅನ್ನವನ್ನು ಕೊಡುವ ಏಕೈಕ ಉದ್ದೇಶ ಇಂದಿರಾ ಕ್ಯಾಂಟೀನ್ ಎಂದೆಲ್ಲಾ ತಿಳಿಸಿದ್ದರು. ಆದರೆ ಈಗ ಆಗುತ್ತಿರುವುದು ಏನು?

ಬೆಳಗಿನ ತಿಂಡಿ ಎಂದು ನೀಡುವ ಇಡ್ಲಿ ಗಟ್ಟಿಯಾಗಿದ್ದು ಸಾಂಬಾರೋ ತಟ್ಟೆಯಲ್ಲಿ ನಿಲ್ಲುವುದೇ ಇಲ್ಲ.ಚಟ್ನಿಯಂತೂ ನೀರೋ ನೀರು. ಇನ್ನು ಉಪ್ಪಿಲ್ಲ, ಸೊಪ್ಪಿಲ್ಲ ಇಂತಹ ತಿಂಡಿಯನ್ನು ತಿನ್ನುವುದಾದರೂ ಹೇಗೆ.

5 ರೂ. ಕೊಟ್ಟು ರುಚಿ ಇಲ್ಲದ ತಿಂಡಿ 10 ರೂ. ನೀಡಿ ಸ್ವಾದಿಷ್ಟವಿಲ್ಲದ ಊಟ ಮಾಡುವುದಕ್ಕಿಂತ ಉಪವಾಸ ಇರುವುದೇ ಲೇಸು ಎಂಬ ಲೆಕ್ಕಾಚಾರಕ್ಕೆ ಬಂದಿರುವ ಗ್ರಾಹಕರು ಇಂದಿರಾ ಕ್ಯಾಂಟೀನತ್ತ ಮುಖ ಮಾಡುತ್ತಿಲ್ಲ.

ಸಿಗುತ್ತಿಲ್ಲ ಬಗೆ ಬಗೆಯ ತಿಂಡಿ: ಒಂದೊಂದು ದಿನ ಪುಳಿಯೋಗರೆ, ಖಾರಾ ಬಾತ್, ಪೊಂಗಲ್  , ರವಾ ಕಿಚಡಿ, ಚಿತ್ರಾನ್ನ, ವಾಂಗೀಬಾತ್, ಕೇಸರಿ ಬಾತ್, ಊಟಕ್ಕೆ ಪ್ರತಿ ನಿತ್ಯ ಅನ್ನ-ಸಾಂಬಾರ್, ಮೊಸರನ್ನ ಜತೆಗೆ ಟೊಮ್ಯಾಟೋ ಬಾತ್, ವಾಂಗೀಬಾತ್, ಬಿಸಿ ಬೇಳೆ ಬಾತ್, ಮೆಂತ್ಯಾ ಬಾತ್, ಪಲಾವ್ ನೀಡಲಾಗುವುದು ಎಂದು ಕ್ಯಾಂಟೀನ್ ಮುಂದೆ ತಿಂಡಿ-ಊಟದ ವೇಳಾಪಟ್ಟಿಯ ನಾಮಫಲಕದಲ್ಲಿ ಹಾಕಲಾಗಿದೆ. ಆದರೆ ಆದರಂತೆ ವಿತರಣೆಯಾಗುತ್ತಿಲ್ಲ ಎಂಬ ಆರೋಪಗಳು ಗ್ರಾಹಕರುಗಳಿಂದ ಕೇಳಿ ಬರುತ್ತಿವೆ.

# ಶುದ್ದ ಕುಡಿಯವ ನೀರಿಲ್ಲ: ಕ್ಯಾಂಟೀನ್‍ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದ್ದು, ಕೆಲವೇ ದಿನಗಳಲ್ಲಿ ಕೆಟ್ಟು ಹೋಗಿದೆ. ಕ್ಯಾಂಟೀನ್‍ನವರ ಕ್ಯಾನ್‍ಗಳ ಮೂಲಕ ನೀರು ಗ್ರಾಹಕರಿಗೆ ಕುಡಿಯಲು ನೀಡುತ್ತಿದ್ದಾರೆ.

ಒಟ್ಟಾರೆ ಇಂದಿರಾ ಕ್ಯಾಂಟೀನ್‍ನಲ್ಲಿ ರುಚಿಕರವಾದ ತಿಂಡಿ, ಊಟವೂ ಇಲ್ಲ ಜತೆಗೆ ಶುದ್ಧ ಕುಡಿಯುವ ನೀರು ಸಹ ಇಲ್ಲವಾಗಿದೆ? ಇದು ನಮ್ಮೂರಿನ ಇಂದಿರಾ ಕ್ಯಾಂಟೀನ್ ಪರಿಸ್ಥಿತಿ?

# ಪರಿಶೀಲನೆ:  ಇಂದಿರಾ ಕ್ಯಾಂಟೀನ್ ತಿಂಡಿ ಊಟ ರುಚಿಯಾಗಿದೆಯೇ , ಮೂಲಭೂತ ಸೌಕರ್ಯಗಳು ಲಭ್ಯವಾಗುತ್ತಿದೆಯಾ ಎಂಬುದನ್ನು ನಗರಸಭೆ ಪ್ರತಿನಿತ್ಯ ಪರಿಶೀಲಿಸಬೇಕು. ಆದರೆ ಇಲ್ಲಿನ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಪರಿಶೀಲಿಸುವ ಗೋಜಿಗೆ ಹೋಗುತ್ತಿಲ್ಲ.

ಕಡಿಮೆ ದುಡ್ಡು ಎಂದು ಕ್ಯಾಂಟೀನ್‍ಗೆ ಭೇಟಿ ನೀಡಿದರೆ ಉಪ್ಪು-ಖಾರವಿಲ್ಲದ ಊಟ ನೀಡುತ್ತಾರೆ. ಇಂತಹ ಊಟ ಮಾಡಿ ಏನು ಪ್ರಯೋಜನ ಎನ್ನುತ್ತಾರೆ ಲಾರಿ ಚಾಲಕ ಅಂಬರೀಶ್.

ಸಂಬಂಧಪಟ್ಟ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಬಗ್ಗೆ ನಿಗಾ ವಹಿಸಿದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಇನ್ನು ಮುಂದಾದರೂ ಸರ್ಕಾರ ಬಡವರನ್ನು ಮನುಷ್ಯರೇ ಎಂದು ಪರಿಗಣಿಸಲಿ ಎನ್ನುತ್ತಾರೆ ತೊಂಡೇಬಾವಿ ನಿವಾಸಿ ವೆಂಕಟೇಶ್.

Facebook Comments

Sri Raghav

Admin