ಮಾಘ ಮಾಸದ ಕುಂಭಮೇಳಕ್ಕೆ ಪ್ರಚಾರದ ಕೊರತೆ

ಈ ಸುದ್ದಿಯನ್ನು ಶೇರ್ ಮಾಡಿ

ಟಿ.ನರಸೀಪುರ, ಫೆ.12- ಮಾಘ ಮಾಸದ ಕುಂಭ ಮೇಳಕ್ಕೆ 5 ದಿನಗಳು ಬಾಕಿ ಉಳಿದಿರುವ ಬೆನ್ನಲ್ಲೇ ಸಕಲ ಸಿದ್ಧತೆಗಳು ಬಿರುಸುಗೊಂಡಿದ್ದರೂ ಪ್ರಚಾರದ ಕೊರತೆ ಕಾಡುತ್ತಿದೆ. ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯುವ ನಿಗದಿ ಸ್ಥಳದಲ್ಲಿ ಶಾಮಿಯಾನ ಅಳವಡಿಸಲಾಗುತ್ತದೆ.

ಪುಣ್ಯ ಸ್ನಾನದ ನಂತರ ಬಟ್ಟೆ ಬದಲಿಸುವ ತಾತ್ಕಾಲಿಕ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ. ಮಠಾಧೀಶರು ಹಾಗೂ ಯತಿವರ್ಯರು ಸ್ನಾನ ಮಾಡುವ ನಿಗದಿತ ಸ್ಥಳದ ಸುತ್ತ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿ ಭರದಿಂದ ಸಾಗುತ್ತಿದ್ದು , ಸಂಗಮದ ಮಧ್ಯ ಭಾಗದಲ್ಲಿರುವ ನಡು ಹೊಳೆ ಬಸವೇಶ್ವರ ಸ್ವಾಮಿ ದರ್ಶನ ಪಡೆಯಲು ಭಕ್ತರಿಗೆ ಅನುಕೂಲಗವಾಗುವಂತೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ.

ನದಿಯ ಮೂಲಕ ಹಾದು ಹೋಗಲು ಮರಳಿನ ಮೂಟೆ ಅಳವಡಿಸಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದೆ. ಆದರೆ ಕುಂಭಮೇಳದ ಪೂರ್ವಭಾವಿ ಸಭೆಯಲ್ಲಿ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಸೂಚನೆ ನೀಡಿದಂತೆ ಗುಂಜಾನರಸಿಂಹಸ್ವಾಮಿ ದೇವಸ್ಥಾನದಿಂದ ಯಾಗ ಮಂಟಪದವರಗೆ ನಿರ್ಮಿಸ ಬೇಕಿದ್ದ ತೂಗು ಸೇತುವೆ ಆರಂಭವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಅಲ್ಲದೆ ರುದ್ರಪಾದ ದರ್ಶನಕ್ಕೂ ಸಹ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಪಿಟೀಲು ಚೌಡಯ್ಯ ವೃತ್ತದಿಂದ ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನವರೆಗಿನ ರಸ್ತೆಗೆ ಡಾಂಬರ್ ಹಾಕುವ ಕೆಲಸಕ್ಕೆ ಚಾಲನೆ ದೊರೆತಿದೆ.

ಭಕ್ತಾದಿಗಳಿಗಾಗಿ ಮೈಸೂರು ರಸ್ತೆಯ ಚೆಕ್ ಪೋಸ್ಟ್ ಬಳಿ ಪಾರ್ಕಿಂಗ್ ವ್ಯವಸ್ತೆ ಕಲ್ಪಿಸಲಾಗಿದೆ. ಅಗತ್ಯವಿರುವ ಕಡೆ ಗೋಡೆಗಳ ಮೇಲೆ ಚಿತ್ರಕಲೆಗಳನ್ನು ಬಿಡಿಸುವ ಕಾರ್ಯ ಸಾಗುತ್ತಿದ್ದು , ಭಕ್ತಾದಿಗಳ ದಣಿವಾರಿಸಲು ಇದೇ ಮೊದಲ ಬಾರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಕೆಲವು ದಿನಗಳು 5 ದಿನಗಳು ಮಾತ್ರ ಮೇಳಕ್ಕೆ ಬಾಕಿ ಇದ್ದು, ಪ್ರಚಾರ ಸ್ಥಳೀಯವಾಗಿ ಮಾತ್ರವಲ್ಲದೇ ಹೊರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಚಾರ ಸಿಗಬೇಕಿದೆ. ಆದರೆ ಪ್ರತಿ ಬಾರಿ ಕುಂಭಮೇಳ ನಡೆದಾಗಲು ಶಾಶ್ವತ ಕಾಮಗಾರಿಗಳನ್ನು ನಡೆಸುವ ಭರವಸೆ ನೀಡಲಾಗುತ್ತದೆ. ಆದರೆ ಶಾಶ್ವತ ಕಾಮಗಾರಿ ನಡೆಯುತ್ತಿಲ್ಲ ಈ ಬಾರಿಯೂ ಕೂಡ ತರಾತುರಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚಿನ ಪ್ರಚಾರದೊಂದಿಗೆ ಶಾಶ್ವತ ಕಾಮಗಾರಿಗಳನ್ನು ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

– ಮಹದೇವ, ಟಿ.ನರಸೀಪುರ

Facebook Comments