ಅತೃಪ್ತರಿಗೆ ಕೊನೆಯ ಅವಕಾಶ ನೀಡಿದ ಕಾಂಗ್ರೆಸ್, ಅಧಿವೇಶನ ಮುಗಿಯುವವರೆಗೆ ಡೆಡ್ಲೈನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.12- ಅತೃಪ್ತ ಶಾಸಕರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಕೊನೆಯ ಅವಕಾಶ ನೀಡಿದ್ದು, ಅಧಿವೇಶನ ಮುಗಿಯುವುದರ ಒಳಗಾಗಿ ಕಾಲಾಪಕ್ಕೆ ಹಾಜರಾಗುವಂತೆ ಗಡುವು ನೀಡಲಾಗಿದೆ.

ಕ್ಷೇತ್ರ ತೊರೆದು ಅಧಿವೇಶನಕ್ಕೆ ಹಾಜರಾಗದೆ ಮುಂಬೈ ಹೋಟೆಲ್‍ನಲ್ಲಿ ಕಳೆದ ಒಂದು ತಿಂಗಳಿನಿಂದ ಬಿಡಾರ ಹೂಡಿರುವ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ, ಉಮೇಶ್‍ಜಾಧವ್ ಅವರುಗಳ ಜತೆ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಕೊನೆ ಅವಕಾಶವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಈವರೆಗೂ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದ ನಾಲ್ವರು ಅತೃಪ್ತ ಶಾಸಕರು ನಿನ್ನೆ ಸ್ಪೀಕರ್‍ಗೆ ದೂರು ನೀಡಿದ ನಂತರ ಈಗ ಮಾತುಕತೆಗೆ ಮುಂದಾಗಿದ್ದಾರೆ.

ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಉಪ ಮುಖ್ಯಮಂತ್ರಿ ಪರಮೇಶ್ವರ್ ನಿನ್ನೆ ಸ್ಪೀಕರ್‍ಗೆ ದೂರು ನೀಡಿದ್ದರು.

ದೂರು ಆಧರಿಸಿ ಸ್ಪೀಕರ್ ಅವರು ನೋಟಿಸ್ ಜಾರಿ ಮಾಡಿ ವಿಚಾರಣೆ ಆರಂಭಿಸಬೇಕಿದೆ. ನಿನ್ನೆ ದೂರು ಸಲ್ಲಿಕೆಯಾಗುತ್ತಿದ್ದಂತೆ ಅತೃಪ್ತ ಶಾಸಕರಲ್ಲಿ ಗಲಿಬಿಲಿ ಆರಂಭವಾಗಿದ್ದು, ಕಾಂಗ್ರೆಸ್ ಮುಖಂಡರ ಜತೆ ಮಾತುಕತೆ ಸಿದ್ದರಾಗಿ ಕೆ.ಸಿ.ವೇಣುಗೋಪಾಲ್ ಅವರ ಜತೆ ಮಾತುಕತೆ ನಡೆಸಿದ್ದಾರೆ.

ಕೂಡಲೇ ಮುಂಬೈನಿಂದ ಬಂದು ಅಧಿವೇಶನದಲ್ಲಿ ಭಾಗವಹಿಸಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಎದುರು ಹಾಜರಾಗಿ ಲಿಖಿತ ಸಮಜಾಯಿಷಿ ನೀಡಿದರೆ ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಮರು ಪರಿಶೀಲಿಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದ್ದಾರೆ ಎನ್ನಲಾಗಿದೆ.

# ಕಾನೂನಿನ ಅಭಯ:  ಈ ನಡುವೆ ಸ್ಪೀಕರ್ ಅವರಿಗೆ ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ವಿಪ್ ಉಲ್ಲಂಘನೆ ಮಾಡಿ ಮತ ಚಲಾವಣೆ ಮಾಡಿದರೆ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತದೆ. ಅದರ ಹೊರತಾಗಿ ಹೊರಗಿನ ಚಟುವಟಿಕೆಗಳನ್ನು ಆಧಾರವಾಗಿಟ್ಟುಕೊಂಡು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಅವಕಾಶವಿಲ್ಲ.

ಒಂದು ವೇಳೆ ಅನರ್ಹಗೊಳಿಸಿದರೂ ಅದು ಶಾಸಕ ಸ್ಥಾನದಿಂದ ಮಾತ್ರ ಉಚ್ಚಾಟಿಸಬಹುದೇ ಹೊರತು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಲು ಅವಕಾಶವಿಲ್ಲ.

ಕ್ರಿಮಿನಲ್ ಪ್ರಕರಣದಲ್ಲಿ ಕನಿಷ್ಠ 2 ವರ್ಷ ಶಿಕ್ಷಕೆಗೆ ಒಳಗಾಗಿದ್ದರೆ ಆಗ ಮಾತ್ರ ಆರು ವರ್ಷದವರೆಗೂ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಲು ಅವಕಾಶವಿದೆ.

ಈಗಿನ ಪ್ರಕರಣದಲ್ಲಿ ಬಲವಂತವಾಗಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರೂ ಕೂಡ ಮುಂದೆ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಚುನಾವಣೆ ನಿಷೇಧದ ಆತಂಕದಲ್ಲಿದ್ದ ಅತೃಪ್ತ ಶಾಸಕರು ಕಾನೂನು ತಜ್ಞರ ಸಲಹೆಯಿಂದ ನಿರಾಳವಾಗಿದ್ದು, ರಾಜೀನಾಮೆ ನೀಡುವುದು ಖಚಿತವಿದ್ದು, ಒಂದು ವೇಳೆ ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಳಿಸಿದರೆ ನಾವು ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಗೆದ್ದು ಬರುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.

# ಕಾಂಗ್ರೆಸ್‍ನಲ್ಲೂ ಗೊಂದಲ:  ನಾಲ್ಕು ಮಂದಿ ಅತೃಪ್ತ ಶಾಸಕರ ಅನರ್ಹಕ್ಕೆ ದೂರು ನೀಡಿರುವ ಕಾಂಗ್ರೆಸ್‍ನಲ್ಲೂ ಗೊಂದಲ ಉಂಟಾಗಿದೆ. ಆಪರೇಷನ್ ಆಡಿಯೋದಿಂದ ಬಿಜೆಪಿಗೆ ಸದ್ಯಕ್ಕೆ ಹಿನ್ನಡೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಆಪರೇಷನ್ ನಿಂತು ಹೋಗಲಿದೆ ಎಂಬ ಖಾತ್ರಿ ಇಲ್ಲ.

ಒಂದು ವೇಳೆ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಮುಂದುವರಿಸಿದರೆ ಕಾಂಗ್ರೆಸ್ ಅವರ ಹಾದಿಯನ್ನು ಸುಗಮ ಮಾಡಿಕೊಟ್ಟಂತಾಗುತ್ತದೆ.
ನಾಲ್ವರು ಅತೃಪ್ತರನ್ನು ಅನರ್ಹಗೊಳಿಸಿದರೆ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 114ಕ್ಕೆ ಇಳಿಯಲಿದೆ.

ರೆಸಾರ್ಟ್ ಬಡಿದಾಟದ ಪ್ರಕರಣದಲ್ಲಿ ಈಗಾಗಲೇ ಕಾಂಗ್ರೆಸ್‍ನಿಂದ ಒಂದು ಕಾಲು ಹೊರಗಿಟ್ಟಿರುವ ಕಂಪ್ಲಿ ಗಣೇಶ್ ಕೂಡ ಅತೃಪ್ತರ ಹಾದಿ ತುಳಿದರೆ ಸಂಖ್ಯಾಬಲ 113ರಷ್ಟಾಗಲಿದ್ದು, ಸರ್ಕಾರ ಕೆಡವಲು ಬಿಜೆಪಿಗೆ ಸುಗಮವಾದ ದಾರಿ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಅತೃಪ್ತರನ್ನು ಅನರ್ಹಗೊಳಿಸದೆ, ಅವರಾಗಿಯೇ ರಾಜೀನಾಮೆ ಕೊಟ್ಟರೂ ಅಂಗೀಕರಿಸದೆ ಒಂದಷ್ಟು ದಿನ ಕಾಲಹರಣ ಮಾಡುವ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

Facebook Comments

Sri Raghav

Admin