ವಿಶ್ವಕಪ್ ನಂತರ ಧೋನಿ ನಿವೃತ್ತಿ..?

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಫೆ.12- ಟೀಂ ಇಂಡಿಯಾದ ಕ್ಯೂಲ್ ಕ್ಯಾಪ್ಟನ್ ಎಂದೇ ಬಿಂಬಿತಗೊಂಡಿದ್ದ, ಚುರುಕು ಫೀಲ್ಡರ್, ರನ್ ಮಿಷನ್ ಮುಂತಾದ ವಿಶೇಷತೆಗಳಿಂದ ಗುರುತಿಸಿಕೊಂಡಿರುವ ಮಹೇಂದ್ರಸಿಂಗ್ ಧೋನಿ ವಿಶ್ವಕಪ್ ನಂತರ ನಿವೃತ್ತಿ ಆಗುತ್ತಾರೆ ಎಂಬ ಗುಟ್ಟನ್ನು ಟೀಂ ಇಂಡಿಯಾದ ಆಯ್ಕೆ ಮಂಡಳಿಯ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ಇಂದಿಲ್ಲ ಬಿಟ್ಟುಕೊಟ್ಟಿದ್ದಾರೆ.

ಆಂಗ್ಲರ ನಾಡಿನಲ್ಲಿ ನಡೆಯುವ ವಿಶ್ವಕಪ್ ಅನ್ನು ಗೆಲ್ಲಲೇಬೇಕೆಂಬ ಗುರಿಯನ್ನು ಇಟ್ಟುಕೊಂಡು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 5 ಏಕದಿನ ಹಾಗೂ 2 ಟ್ವೆಂಟಿ-20 ಪಂದ್ಯಗಳ ಸರಣಿಗೆ ಸದ್ಯದಲ್ಲೇ ತಂಡವನ್ನು ಪ್ರಕಟಿಸಲಿದ್ದು, ವಿಶ್ವಕಪ್‍ಗೂ ಮುನ್ನ ಧೋನಿಗೆ ಹೆಚ್ಚಿನ ಅವಕಾಶಗಳು ದೊರೆಯಲಿ ಎಂಬ ಉದ್ದೇಶದಿಂದ ಅವರನ್ನು ಆಯ್ಕೆ ಮಾಡುವತ್ತ ಚಿತ್ತ ಹರಿಸಿದ್ದೇವೆ ಎಂದರು.

ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಸರಣಿ ಗೆಲ್ಲಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮಹೇಂದ್ರಸಿಂಗ್‍ಧೋನಿ ಅವರು ನ್ಯೂಜಿಲೆಂಡ್ ಪ್ರವಾಸದಲ್ಲಿ ತಮ್ಮ ಬ್ಯಾಟಿಂಗ್ ಲಯವನ್ನು ಕಳೆದುಕೊಂಡಂತೆ ಕಂಡರೂ ವಿಶ್ವಕಪ್‍ಗೂ ಮುನ್ನವೇ ನಡೆಯಲಿರುವ ಐಪಿಎಲ್‍ನಲ್ಲಿ ಮಹೇಂದ್ರಸಿಂಗ್ ಧೋನಿ ತಮ್ಮ ಬ್ಯಾಟಿಂಗ್ ಮಿಂಚನ್ನು ಹರಿಸಲಿದ್ದಾರೆ ಎಂಬ ವಿಶ್ವಾಸದ ಮಾತುಗಳನ್ನು ಆಡಿದರು.

ರೋಹಿತ್‍ಗೆ ವಿಶ್ರಾಂತಿ…? :  ಸತತ ಸರಣಿಗಳಿಂದ ಬಳಲಿರುವ ಟೀಂ ಇಂಡಿಯಾದ ಹಂಗಾಮಿ ನಾಯಕ ರೋಹಿತ್ ಶರ್ಮಾಗೆ ಆಸ್ಟ್ರೇಲಿಯಾ ಸರಣಿಯಿಂದ ವಿಶ್ರಾಂತಿ ನೀಡುವತ್ತಲೂ ಗಮನವನ್ನು ಹರಿಸಲಾಗಿದೆ.

ಆಸ್ಟ್ರೇಲಿಯಾದ ಸರಣಿ ಹಾಗೂ ನ್ಯೂಜಿಲೆಂಡ್ ಸರಣಿಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ತಂಡವನ್ನು ಮುನ್ನಡೆಸಿದ್ದರು, ವಿಶ್ವಕಪ್‍ಗೂ ಮುನ್ನವೇ ನಡೆಯಲಿರುವ ಐಪಿಎಲ್‍ನಲ್ಲಿ ರೋಹಿತ್ ಸಕ್ರಿಯವಾಗಿ ಪಾಲ್ಗೊಳ್ಳಬೇಕಿರುವುದರಿಂದ ಅವರಿಗೆ ಆಸ್ಟ್ರೇಲಿಯಾ ಸರಣಿಯಿಂದ ವಿಶ್ರಾಂತಿ ನೀಡುವುದು ಸಹಜವಾಗಿದೆ ಎಂದರು.

ಆಸ್ಟ್ರೇಲಿಯಾ ಸರಣಿಯ ಸಾರಥ್ಯವನ್ನು ವಿರಾಟ್ ಕೊಹ್ಲಿಯೇ ಹೊರಲಿದ್ದು, ವೇಗಿ ಜಸ್‍ಪ್ರೀತ್ ಬೂಮ್ರಾ ತಂಡವನ್ನು ಸೇರಿಕೊಳ್ಳಲಿದ್ದು, ರೋಹಿತ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‍ಗೆ ಸ್ಥಾನ ಕಲ್ಪಿಸಲಾಗುವುದು ಎಂದು ಎಂ.ಎಸ್.ಕೆ. ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments