ವಿವಾದಿತ ಆಡಿಯೋ ತನಿಖೆ ಕುರಿತು ವಿಧಾನಸಭೆಯಲ್ಲಿ ವಾಗ್ವಾದ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.12- ವಿವಾದಿತ ಧ್ವನಿಸುರುಳಿಯ ಬಗ್ಗೆ ತನಿಖೆಗೆ ವಹಿಸುವ ವಿಚಾರ ಇಂದು ಕೂಡ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಕಾವೇರಿದ ಧ್ವನಿಯಲ್ಲಿ ವಾಗ್ವಾದ ನಡೆಯಿತು.

ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮಾತನಾಡುತ್ತಾ, ಧ್ವನಿಸುರುಳಿಯ ವಿಚಾರವನ್ನು ಹೊರಗೆ ತಂದವರು ಯಾರು? ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಲವೆ ಎಂದಾಗ ? ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಏರಿದ ಧ್ವನಿಯಲ್ಲಿ ಮಾತಿಗಿಳಿದರು.

ಪ್ರತಿಯಾಗಿ ಬಿಜೆಪಿ ಸದಸ್ಯರು ಮಾತನಾಡಲು ಮುಂದಾದಾಗ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಬೋಪಯ್ಯ ಅವರನ್ನು ಉದ್ದೇಶಿಸಿ ಧ್ವನಿ ಸುರುಳಿ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ನೀವೇ ಹೇಳಿದ್ದಲ್ಲವೆ ಎಂದು ಛೇಡಿಸಿದರು.

ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಅವರು ಏನು ಬೇಕಾದರೂ ಮಾಡಬಹುದು. ಆದರೆ, ಹೊರಗಡೆ ಬಂದರೆ ತೊಂದರೆಯಾಗುತ್ತದೆ ಎಂಬ ಅಭಿಪ್ರಾಯವೇ ಎಂದು ಪ್ರಶ್ನಿಸಿದರು.  ಯಾರ ಮೇಲೂ ಆರೋಪ ಮಾಡುತ್ತಿಲ್ಲ. ತನಿಖೆಯಾಗಲಿ ಎಂದರು.

ಈ ಹಂತದಲ್ಲಿ ವಾಗ್ವಾದ, ಮಾತಿನ ಚಕಮಕಿ ಮುಂದುವರಿದಾಗ ಮಧ್ಯಪ್ರವೇಶಿಸಿದ ಸ್ಪೀಕರ್, ಸದನ ಇರುವುದೇ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಲಿಕ್ಕೆ, ಒಬ್ಬರು ಮಾತನಾಡುವಾಗ ಮತ್ತೊಬ್ಬರು ಮಧ್ಯ ಪ್ರವೇಶ ಮಾಡಬೇಡಿ.

ಎಲ್ಲರಿಗೂ ಅವಕಾಶ ನೀಡಲಾಗುವುದು. ಮಾತನಾಡುವಾಗ ಅಡ್ಡಿ ಪಡಿಸಿದರು ಎಂಬ ಭಾವನೆ ಬೇಡ ನಿಮ್ಮ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗುವುದು ಎಂದು ಹೇಳುವ ಮೂಲಕ ಗದ್ದಲದ ವಾತಾವರಣವನ್ನು ತಿಳಿಗೊಳಿಸಿದರು.

ಬಿಜೆಪಿಯ ಹಿರಿಯ ಶಾಸಕ ಬಿ.ಶ್ರೀರಾಮುಲು ಮಾತನಾಡಿ, ಕೆ.ಜಿ.ಬೋಪಯ್ಯ ಅವರು ವಿಧಾನಸಭಾಧ್ಯಕ್ಷರಾಗಿದ್ದ ಅವಧಿಯಿಂದ ಇಲ್ಲಿಯವರೆಗೂ ತನಿಖೆಯಾಗಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೇರಿಸಬೇಕು ಎಂದಾಗ ಕೆರಳಿದ ಆಡಳಿತ ಪಕ್ಷದ ಸದಸ್ಯರು, ಏರಿದ ಧ್ವನಿಯಲ್ಲಿ ಮಾತನಾಡಲು ಮುಂದಾದರು.

ಸಚಿವರಾದ ಜಮೀರ್ ಅಹಮ್ಮದ್‍ಖಾನ್, ಕೆ.ಜೆ.ಜಾರ್ಜ್ ಸೇರಿದಂತೆ ಆಡಳಿತ ಪಕ್ಷದ ಕೆಲ ಸದಸ್ಯರು ಏರಿದ ದನಿಯಲ್ಲಿ ವಾಗ್ವಾದಕ್ಕಿಳಿದಿರು. ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವರು ಕೂಡ ಅಷ್ಟೇ ಏರಿದ ಧ್ವನಿಯಲ್ಲಿ ಮಾತನಾಡಿದಾಗ ಸದನದಲ್ಲಿ ಕಾವೇರಿದ ವಾತಾವರಣ ಉಂಟಾಯಿತು.

ಒಂದು ಹಂತದಲ್ಲಿ ಈಶ್ವರಪ್ಪ ಅವರು ಕುಸ್ತಿ ಅಕಾಡಕ್ಕೆ ಬಂದಿದ್ದಾರೆಯೇ ಎಂದು ಆಡಳಿತ ಪಕ್ಷದವರನ್ನು ಪ್ರಶ್ನಿಸಿದರು. ಜಮೀರ್ ಅಹಮ್ಮದ್‍ಖಾನ್ ಸಿದ್ದರಮಯ್ಯ ಅವರ ಹೆಸರನ್ನು ಏಕೆ ಸೇರಿಸಬೇಕೆಂದು ಪ್ರಶ್ನಿಸಿದರು.

ವಾಗ್ವಾದ, ಮಾತಿನಚಕಮಕಿ ನಡೆಯುತ್ತಿರುವುದನ್ನು ಗಮನಿಸಿದ ಸಭಾಧ್ಯಕ್ಷರು ಶ್ರೀರಾಮುಲು ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ಅಸಂಸದೀಯ ಶಬ್ಧ ಬಳಕೆಯಾಗಿದ್ದರೆ ಕಡತದಿಂದ ತೆಗೆಸಲಾಗುವುದು. ತಾವೆಲ್ಲರೂ ಸಿದ್ದರಾಮಯ್ಯ ಅವರ ಅಭಿಮಾನಿಗಳು, ಸಿದ್ದರಾಮಯ್ಯ ಅವರೇ ಸದನದಲ್ಲಿ ಸುಮ್ಮನಿದ್ದಾರೆ. ನೀವೇಕೆ ಸಿಟ್ಟಿಗೇಳುತ್ತೀರಿ ಎಂದರು.

ಮಾತು ಮುಂದುವರಿಸಿದ ಸಭಾಧ್ಯಕ್ಷರು, ಜಮೀರ್ ಅಹಮದ್‍ಖಾನ್ ಮತ್ತು ನಾಡಗೌಡರನ್ನು ಉದ್ದೇಶಿಸಿ, ನೀವೇ ಸಿಟ್ಟಿಗೆ ಬಂದರೆ ಹೇಗೆ? ಮಸಾಲೆ ಕಡಿಮೆ ತಿನ್ನಬೇಕು ಎಂದು ಹೇಳುವ ಮೂಲಕ ಗದ್ದಲದ ವಾತಾವರಣವನ್ನು ತಿಳಿಸಿಗೊಳಿಸಿದರು.

Facebook Comments

Sri Raghav

Admin