ಆಡಿಯೋ ಪ್ರಕರಣದ ಎಸ್‍ಐಟಿ ತನಿಖೆ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ : ಸ್ಪೀಕರ್ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.12-ಆಪರೇಷನ್ ಕಮಲ ಆಡಿಯೋ ಪ್ರಕರಣವನ್ನು ವಿಶೇಷ ತನಿಖಾ ದಳ(ಎಸ್‍ಐಟಿ)ದ ಮೂಲಕ ತನಿಖೆ ನಡೆಸುವ ನಿರ್ಧಾರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ಪುನರುಚ್ಚರಿಸಿದ್ದಾರೆ.

ಒಂದೆಡೆ ಪ್ರತಿಪಕ್ಷ ಬಿಜೆಪಿ ಎಸ್‍ಐಟಿ ಬದಲು ನ್ಯಾಯಾಂಗ ಇಲ್ಲವೆ ಸದನ ಸಮಿತಿ ಮೂಲಕ ತನಿಖೆ ನಡೆಸುವಂತೆ ಸದನದಲ್ಲಿ ಗದ್ದಲ ಎಬ್ಬಿಸಿರುವ ಸಂದರ್ಭದಲ್ಲೇ ಸ್ಪೀಕರ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಬೆಳಗ್ಗೆ ವಿಧಾನಸಭೆಯಲ್ಲಿ ಕಲಾಪಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ಪ್ರಕರಣವನ್ನು ಈಗಾಗಲೇ ಎಸ್‍ಐಟಿ ಮೂಲಕ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದೇನೆ.

ನನ್ನ ನಿರ್ಧಾರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಕೊಳ್ಳುವುದಿಲ್ಲ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು. ಈ ಪ್ರಕರಣದಲ್ಲಿ ಸ್ವತಃ ನನ್ನ ಹೆಸರೇ ಕೇಳಿಬಂದಿರುವುದರಿಂದ ನನ್ನ ನೇತೃತ್ವದಲ್ಲಿ ತನಿಖೆ ನಡೆಸುವುದು ಅಷ್ಟು ಸರಿಯಲ್ಲ. ಆರೋಪಿ ಸ್ಥಾನದಲ್ಲಿರುವವರು ತನಿಖೆ ನಡೆಸಿದರೆ ವರದಿಯ ಪಾವಿತ್ರ್ಯತೆ ಉಳಿಯುವುದಿಲ್ಲ. ಇದು ಗಂಭೀರವಾದ ಪ್ರಕರಣವಾಗಿರುವುದರಿಂದ ಎಸ್‍ಐಟಿ ತನಿಖೆಯೇ ಸೂಕ್ತ ಎಂದರು.

ಸದನ ಸಮಿತಿ ಇಲ್ಲವೆ, ನ್ಯಾಯಾಂಗ ತನಿಖೆಯಿಂದ ಪ್ರಕರಣ ವಿಳಂಬವಾಗುತ್ತದೆ. 15ದಿನದಲ್ಲಿ ವರದಿ ಬರುವುದರಿಂದ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ. ಯಾರಿಗೂ ಈ ಬಗ್ಗೆ ಅಪನಂಬಿಕೆ ಬೇಡ ಎಂದು ಸ್ಪಷ್ಟಪಡಿಸಿದರು.

ಎಸ್‍ಐಟಿ ತನಿಖೆ ನಡೆಸುವುದರಿಂದ ಮುಖ್ಯಮಂತ್ರಿಗಾಗಲಿ ಅಥವಾ ಬೇರೆಯವರಿಗೆ ನೋಟೀಸ್ ನೀಡಬಾರದೆಂಬ ನಿಯಮವಿಲ್ಲ. ತನಿಖಾಧಿಕಾರಿಗಳು ಯಾರಿಗೆ ಬೇಕಾದರೂ ನೋಟೀಸ್ ನೀಡಲು ಸ್ವತಂತ್ರರು. ಈ ಪ್ರಕರಣದಲ್ಲಿ ಕೆಲವು ಹೊಸ ನಿಯಮಾವಳಿಯ ಮಾರ್ಗಸೂಚಿಗಳನ್ನು ರೂಪಿಸುತ್ತೇವೆ.

ಎಸ್‍ಐಟಿ ತನಿಖಾ ತಂಡ ನನಗೆ ವರದಿ ನೀಡುವುದಿಲ್ಲ. ಡಿಜಿಪಿ ಮತ್ತು ಗೃಹ ಇಲಾಖೆ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸುತ್ತಾರೆ. ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ನಾಲ್ವರು ಶಾಸಕರ ಅನರ್ಹತೆ ಕುರಿತಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದವರು ನನಗೆ ದೂರು ನೀಡಿದ್ದಾರೆ. ಸುಮಾರು 28 ಪುಟಗಳ ದಾಖಲೆಗಳನ್ನು ಸಲ್ಲಿಸಿದ್ದಾರೆ. ವಿಧಾನಸಭೆ ಕಲಾಪ ನಡೆಯುತ್ತಿರುವುದರಿಂದ ನಾನು ಈ ಬಗ್ಗೆ ಗಮನ ನೀಡಲು ಸಾಧ್ಯವಾಗಿಲ್ಲ.

ಕಲಾಪ ಮುಗಿದ ಬಳಿಕ ಕಾನೂನು ತಜ್ಞರು, ಅಡ್ವೊಕೇಟ್ ಜನರಲ್, ಸಂವಿಧಾನ ತಜ್ಞರ ಸಲಹೆ ಪಡೆದು ಶಾಸಕರ ವಿರುದ್ಧ ನೀಡಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡುತ್ತೇವೆ. ಈ ಎಲ್ಲಾ ಪ್ರಕ್ರಿಯೆಗಳಿಗೆ ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ. ಅಧಿವೇಶನದ ಬಳಿಕವಷ್ಟೇ ನಾನು ನನ್ನ ಪ್ರಕ್ರಿಯೆ ಆರಂಭಿಸುತ್ತೇನೆ ಎಂದು ಹೇಳಿದರು.

Facebook Comments

Sri Raghav

Admin