ಆಟೋ-ಟೆಂಪೋ ಮುಖಾಮುಖಿ, ಚಾಲಕ ಸೇರಿ ಮೂವರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು, ಫೆ.15- ಅಪೆ ಆಟೋ ಹಾಗೂ ಟೆಂಪೋ ನಡುವೆ ನಡೆದ ಅಪಘಾತದಲ್ಲಿ ಆಟೋ ಚಾಲಕ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟು, ಇತರರು ಗಾಯಗೊಂಡಿರುವ ಘಟನೆ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಳ್ಳೂರು ಗ್ರಾಮದ ಸಮೀಪ ನಿನ್ನೆ ಸಂಜೆ ನಡೆದಿದೆ.

ಬೇಲೂರು ಮೂಡಿಗೆರೆ ರಸ್ತೆಯ ಬಳ್ಳೂರು ಗ್ರಾಮದ ಸಮೀಪ ಅಪಘಾತ ಸಂಭವಿಸಿದ್ದು, ಆಟೊದಲ್ಲಿದ್ದ ನೆಟ್ಟೇಕೆರೆ ಗ್ರಾಮದ ಮಂಜುಳಮ್ಮ (55), ಲಕ್ಕಮ್ಮ (58) ಹಾಗೂ ದಬ್ಬೆ ಗ್ರಾಮದ ಆಟೋ ಚಾಲಕ ಶಿವು (32) ಮೃತಪಟ್ಟ ದುರ್ದೈವಿಗಳು.

ಇನ್ನುಳಿದ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಆಟೋದಲ್ಲಿದ್ದವರೆಲ್ಲ ಕೂಲಿ ಕಾರ್ಮಿಕರಾಗಿದ್ದು ಕಾಫಿ ತೋಟದಲ್ಲಿ ದೈನಂದಿನ ಕೆಲಸ ಮುಗಿಸಿ ವಾಪಸ್ಸು ಮರಳುತ್ತಿದ್ದ ಸಂದರ್ಭದಲ್ಲಿ ಬೇಲೂರಿನಿಂದ ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಟೆಂಪೋ ಹಾಗೂ ಆಪೆ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ಘಟನೆ ಸಂಭವಿಸಿದೆ.

ತಕ್ಷಣವೆ ಬಳ್ಳೂರು ಗ್ರಾಮಸ್ಥರು ಹಾಗೂ ರಸ್ತೆಯಲ್ಲಿ ತೆರಳುತಿದ್ದ ಇತರೆ ವಾಹನಗಳ ಸವಾರರು ಗಾಯಾಳುಗಳನ್ನು ತಮ್ಮ ವಾಹನಗಳಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಮೃತಪಟ್ಟ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.

ಅಪಘಾತದಿಂದ ಒಂದು ಗಂಟೆಗೂ ಹೆಚ್ಚು ಕಾಲ ಈ ಮಾರ್ಗದಲ್ಲಿ ವಾಹನ ದಟ್ಟಣೆಯುಂಟಾಗಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹ ತೆರವುಗೊಳಿಸಿ, ವಾಹನ ದಟ್ಟಣೆಯನ್ನು ನಿವಾರಿಸುವಲ್ಲಿ ಪರದಾಡುವಂತ್ತಾಯಿತು.

ಇದೇ ಸಂದರ್ಭದಲ್ಲಿ ಬಳ್ಳೂರು ಗ್ರಾಮಸ್ಥರು ಈ ರಸ್ತೆಗೆ ಹಂಪ್ಸ್‍ಗಳನ್ನು ಹಾಕಿಸಿ ಅಪಘಾತಗಳನ್ನು ತಪ್ಪಿಸುವಂತೆ ಮನವಿ ಮಾಡಿದರು. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments