ಗುರು ಪಾರ್ಥಿವ ಶರೀರ ತರಲು ವಿಳಂಬ, ಗುಡಿಗೆರಿಯಲ್ಲಿ ಗ್ರಾಮಸ್ಥರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಫೆ.16- ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲು ವಿಳಂಬವಾಗುತ್ತಿದೆ ಎಂದು ಆರೋಪಿಸಿ ಗುಡಿಗೆರಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ವಿಶೇಷ ವಿಮಾನದ ಮೂಲಕ ಹುತಾತ್ಮ ಯೋಧ ಗುರು ಪಾರ್ಥಿವ ಶರೀರ ತರಬೇಕು ಎಂದು ಪಟ್ಟು ಹಿಡಿದಿದ್ದಾರೆ.ಈಗಾಗಲೇ ಯೋಧ ಗುರು ಹುತಾತ್ಮರಾಗಿ ಮೂರು ದಿನಗಳಾಗಿದ್ದು, ಪಾರ್ಥಿವ ಶರೀರಕ್ಕಾಗಿ ಕುಟುಂಬಸ್ಥರು ಕಾಯುತ್ತಿದ್ದು, ಇನ್ನು ಬಾರದಿರುವುದರಿಂದ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯೋಧ ಗುರು ಪಾರ್ಥಿವ ಶರೀರ ಇಂದು ಮಧ್ಯಾಹ್ನ 11.30ರ ಹೊತ್ತಿಗೆ ಬೆಂಗಳೂರಿಗೆ ಬರಲಿದ್ದು, ಮಧ್ಯಾಹ್ನದ ವೇಳೆಗೆ ಗುಡಿಗೆರೆಗೆ ತಲುಪಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಮಾಹಿತಿ ನೀಡಿದ್ದಾರೆ.

ಆದರೂ ಕೂಡ ಗ್ರಾಮಸ್ಥರು, ಸಾರ್ವಜನಿಕರು ಮಳವಳ್ಳಿ-ಮದ್ದೂರು ಮಧ್ಯೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಹೆದ್ದಾರಿಯಲ್ಲಿ ಗಂಟೆಗಟ್ಟಲೇ ವಾಹನಗಳು ನಿಂತಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಯಿತು.

ಯೋಧ ಗುರುವಿನ ಆಪ್ತರು, ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿ, ಗುರು ಹುತಾತ್ಮರಾಗಿ ಮೂರು ದಿನವಾದರೂ ಪಾರ್ಥೀವ ಶರೀರ ಇನ್ನೂ ಬಂದಿಲ್ಲ. ವಿಶೇಷ ವಿಮಾನದ ಮೂಲಕ ಪಾರ್ಥೀವ ಶರೀರವನ್ನು ಗ್ರಾಮಕ್ಕೆ ತರಬೇಕು. ಹುತಾತ್ಮ ಯೋಧರಿಗೆ ವಿಶೇಷ ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಇತ್ತ ಅವರ ಕುಟುಂಬದವರ ದುಃಖದ ಆಕ್ರಂಧನ ಮುಗಿಲು ಮುಟ್ಟಿತ್ತು. ಕಳೆದ ಮೂರು ದಿನಗಳಿಂದ ಕಳೆಬರಕ್ಕಾಗಿ ಕಾಯುತ್ತಿದ್ದ ಕುಟುಂಬ ವರ್ಗದವರು, ಸಂಬಂಧಿಕರು ಮಗನ ಮುಖ ನೋಡಲು ಹವಣಿಸುತ್ತಿದ್ದರು.

ಯಾವಾಗ ಪಾರ್ಥೀವ ಶರೀರ ಬರುತ್ತದೆ. ಯಾವಾಗ ಮುಖ ನೋಡುತ್ತೇವೆಯೋ ಎಂದು ಗೋಳಿಡುತ್ತಿದ್ದರು. ಇತ್ತ ಅವರ ಸ್ವಂತ ಗ್ರಾಮವಾದ ಮದ್ದೂರಿನ ಗುಡಿಗೆರಿಯಲ್ಲಿ ಶಾಲಾ ಮಕ್ಕಳು, ಯುವಕರು, ಗ್ರಾಮಸ್ಥರು ಯೋಧನ ಭಾವಚಿತ್ರವಿಡಿದು ಮೆರವಣಿಗೆ ನಡೆಸಿ ನಮನ ಸಲ್ಲಿಸಿದರು.

# ಎಳನೀರು ಮಾರುಕಟ್ಟೆ ಬಳಿ ಅಂತ್ಯಸಂಸ್ಕಾರ:
ಗುರು ಕುಟುಂಬಕ್ಕೆ ಸಂಬಂಧಿಸಿದಂತೆ ಒಂದಿಂಚೂ ಜಮೀನಿಲ್ಲ. ಹೀಗಾಗಿ ಗ್ರಾಮದ ಎಳನೀರು ಮಾರುಕಟ್ಟೆ ಎದುರಿನ ಸರ್ಕಾರಿ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸುವುದಾಗಿ ಜಿಲ್ಲಾಧಿಕಾರಿ ಮಂಜುಶ್ರೀ ತಿಳಿಸಿದರು.

ಯೋಧ ಗುರುವಿನ ಸ್ಮಾರಕ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.  ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin