ಪರೀಕ್ಷಾ ಪರ್ವ ಆರಂಭ : ಪೋಷಕರು, ಮಕ್ಕಳು ನೆನಪಿನಲ್ಲಿಡಲೇಬೇಕಾದ ಅಂಶಗಳಿವು

ಈ ಸುದ್ದಿಯನ್ನು ಶೇರ್ ಮಾಡಿ

ಪರೀಕ್ಷೆಗೋಸ್ಕರವೇ ಜೀವಿಸಬೇಡಿ. ಪರೀಕ್ಷೆಗಳಿಂದ ಆಚೆಗೂ ಜೀವನವಿದೆ. ಪರೀಕ್ಷೆಯಲ್ಲಿ ಕಡಿಮೆ ಸ್ಕೋರ್ ಮಾಡಿದ ಮಾತ್ರಕ್ಕೆ ಜೀವನ ನಿಂತುಬಿಡುವುದಿಲ್ಲ. ಪರೀಕ್ಷೆಗಳನ್ನು ಕಲಿಯಲು ದೊರೆತ ಅವಕಾಶಗಳೆಂದು ತಿಳಿಯಿರಿ. ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಕ್ಕಳ ಅಂಕಪಟ್ಟಿ ಅಥವಾ ರಿಪೋರ್ಟ್ ಕಾರ್ಡ್‍ಗಳನ್ನು ಪೋಷಕರು ತಮ್ಮ ವಿಸಿಟಿಂಗ್ ಕಾರ್ಡ್‍ಗಳೆಂದು ಭಾವಿಸಬಾರದು. ಪೋಷಕರು ತಮ್ಮ ಕನಸುಗಳನ್ನು ಮಕ್ಕಳು ಸಾಕಾರಗೊಳಿಸಬೇಕೆಂದು ನಿರೀಕ್ಷಿಸಬಾರದು. ಪ್ರತಿಯೊಬ್ಬ ಮಗುವಿಗೂ ಅದರದ್ದೇ ಆದ ಶಕ್ತಿ ಸಾಮಥ್ರ್ಯವಿರುತ್ತದೆ.

ಪೋಷಕರ ಪ್ರೋತ್ಸಾಹದಿಂದ ಮಾತ್ರ ಶೇ.60ರಷ್ಟು ಅಂಕ ಗಳಿಸಿದ ಮಗು ಶೇ.70 ಅಥವಾ ಶೇ.80 ಸ್ಕೋರ್ ಮಾಡುವತ್ತ ಮುನ್ನಡೆಯಬಲ್ಲದು. ನಿಮ್ಮ ಮಗು ಶೇ.90 ಗಳಿಸಲಿಲ್ಲ ಎಂದು ನಿಂದಿಸಿದರೆ, ಇದರಿಂದ ಮಕ್ಕಳು ನಿರುತ್ಸಾಹಗೊಳ್ಳುತ್ತಾರೆ. ತಾವು ಅಸಮರ್ಥರೆಂದು ಭಾವಿಸುತ್ತಾರೆ. ಇದರಿಂದ ಮಕ್ಕಳ ಅಂಕ ಗಳಿಕೆ ಮತ್ತಷ್ಟು ಇಳಿಯುತ್ತದೆಯೇ ಹೊರತು ಸುಧಾರಿಸದು. ಬೇರೆ ಮಕ್ಕಳೊಂದಿಗೆ ಹೋಲಿಸದೆ, ಮಕ್ಕಳ ಪ್ರತಿ ಸಣ್ಣ ಸಣ್ಣ ಸುಧಾರಣೆಗಳನ್ನೂ ಪೋಷಕರು ಪ್ರೋತ್ಸಾಹಿಸಬೇಕು.

ನಿರೀಕ್ಷೆ ತುಂಬಾ ಮುಖ್ಯವಾದದ್ದು. ಆದರೆ, ಅದು ನೀವು ಗುರಿಯತ್ತ ಸಾಗಲು ಸ್ಫೂರ್ತಿ ಆಗಬೇಕೇ ಹೊರತು ಹೊರೆಯಾಗಬಾರದು. ತಪ್ಪು ಮಾಡುವುದು ಸಹಜ. ಹಾಗೆಂದು ಪ್ರಪಂಚವೇ ತಲೆ ಮೇಲೆ ಬಿದ್ದಂತೆ ಕೊರಗುವ ಅಗತ್ಯವಿಲ್ಲ. ತಪ್ಪಿನಿಂದ ಪಾಠ ಕಲಿಯಬೇಕು. ನಿಮ್ಮ ಗಮ್ಯ ದೊಡ್ಡದಿರಬೇಕು. ಗಮ್ಯವನ್ನು ತಲುಪುವ ಹಾದಿಯಲ್ಲಿ ಚಿಕ್ಕ ಚಿಕ್ಕ ಗುರಿಗಳಿರಬೇಕು. ನಿಮ್ಮ ಗುರಿಗಳನ್ನು ಬೇರೆಯವರು ನಿರ್ಧರಿಸದೆ, ನೀವೇ ಆಯ್ದುಕೊಳ್ಳಬೇಕು. ದೊಡ್ಡ ಗುರಿ ಸಾಧಿಸಲಾಗದಿದ್ದರೆ ಅದು ಅಕ್ಷಮ್ಯವಲ್ಲ.

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಿಗಷ್ಟೇ ಅಲ್ಲ. ಇದರಿಂದಾಚೆಗಿರುವ ವಿಷಯಗಳಿಗೂ ಮಹತ್ವವಿದೆ. ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು. ಅವರಿಗೆ ಸ್ವತಂತ್ರ ಆಯ್ಕೆಗೆ ಅವಕಾಶ ನೀಡಬೇಕು ಎಂದರು.ಪೋಷಕರು ವಿದ್ಯಾರ್ಥಿಗಳಲ್ಲಿ ಕಂಡು ಬರುವ ಖಿನ್ನತೆಯ ಸಣ್ಣ ಲಕ್ಷಣಗಳನ್ನೂ ಕಡೆಗಣಿಸಬಾರದು. ಅವರಿಗೆ ತಜ್ಞರ ಸಲಹೆ-ಸೂಚನೆ ಕೊಡಿಸಬೇಕು.

# ವಿದ್ಯಾರ್ಥಿಗಳಿಗೆ ಸಲಹೆಗಳು : 
ಪರೀಕ್ಷಾ ಸಮಯದಲ್ಲಿ ಇತರ ಯಾವುದೇ ಕೌಟುಂಬಿಕ ಸಮಸ್ಯೆಗಳಿಗೆ ಗಮನ ಕೊಡಬಾರದು. ಶಿಕ್ಷಕರು ನೀಡಿದ ಅಥವಾ ತಾವೇ ಸಿದ್ಧಪಡಿಸಿದ ನೋಟ್ಸ್‍ಅನ್ನು ಪ್ರತಿದಿನ ಅವಲೋಕಿಸಿ ಮನನ ಮಾಡಿಕೊಳ್ಳಬೇಕು. ಕಾಲ ಮಿತಿಯೊಳಗೆ ಉತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಹಾಗೂ ಮನಸ್ಸಿಗೆ ಬಂದ ಅನುಮಾನಗಳನ್ನು ಸಕಾಲದಲ್ಲಿ ಪರಿಹರಿಸಿಕೊಳ್ಳಬೇಕು.

ಸಂಭವನೀಯ ಪ್ರಶ್ನೆಗಳನ್ನು ಸ್ವತಃ ತಯಾರು ಮಾಡಿ ಅಥವಾ ಶಿಕ್ಷಕರ ನೆರವಿನಿಂದ ಬರೆದು ಉತ್ತರಗಳನ್ನು ಅಭ್ಯಸಿಸಬೇಕು ಹಾಗೂ ಪ್ರತಿ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ನಿಖರವಾದ ಉತ್ತರವನ್ನೇ ಬರೆಯಬೇಕು. ಪ್ರಶ್ನೆಗಳ ಅಂಕಕ್ಕೆ ತಕ್ಕ ಉತ್ತರ ಬರೆಯಬೇಕು. ಕೈ ಬರಹ ಸ್ಪಷ್ಟವಾಗಿರ ಬೇಕು. ಚಿತ್ರಗಳನ್ನು ಅಂದವಾಗಿ ಬರೆದು ಭಾಗಗಳನ್ನು ಗುರುತಿಸಬೇಕು. ಉತ್ತರ ಪತ್ರಿಕೆಗಳಲ್ಲಿ ಚಿತ್ತು ಮಾಡುವುದು, ಬಣ್ಣ ಬಣ್ಣದ ಶಾಹಿ ಬಳಸುವುದು ಸರಿಯಲ್ಲ.

# ನೆನಪಿರಬೇಕಾದ ಅಂಶಗಳು : 
ಪರೀಕ್ಷಾ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಬಯಲು ವದಂತಿಗೆ ಗಮನ ನೀಡಬೇಡಿ. ಪರೀಕ್ಷೆಗಳಲ್ಲಿ ನಕಲು ಮಾಡಿದ್ದಕ್ಕೆ 3 ತಿಂಗಳ ಕಾರಾಗೃಹ ವಾಸ ಹಾಗೂ ಒಂದು ಸಾವಿರ ರೂ.ಗಳ ಜುಲ್ಮಾನೆಗೆ ಕಾನೂನಿನಲ್ಲಿ ಅವಕಾಶವಿದೆ.  ಪರೀಕ್ಷೆಗಳಲ್ಲಿ ಇತರರಂತೆ ನಟಿಸಿ ಹಾಜರಾಗಿದ್ದರೆ ಒಂದು ವರ್ಷದ ಕಾರಾಗೃಹ ವಾಸ ಹಾಗೂ 5 ಸಾವಿರ ರೂ.ಗಳ ಜುಲ್ಮಾನೆ ವಿಧಿಸಬಹುದು.

#ಪರೀಕ್ಷೆಗೆ ಸಂಬಂಧಿಸಿದ ಅಂಕಗಳನ್ನು ವಿದ್ಯಾರ್ಥಿಗಳು ಮಾಹಿತಿ ಹಕ್ಕು ಪಡೆದುಕೊಳ್ಳಲು ನ್ಯಾಯಾಲಯದ ಆದೇಶವಿದೆ. ಪರೀಕ್ಷೆಯಲ್ಲಿ ಬರೆದ ಉತ್ತರ ವ್ಯತ್ಯಾಸಗೊಳಿಸಿದರೆ ಯಾವುದೇ ವ್ಯಕ್ತಿಯು ಸಹ ಒಂದು ವರ್ಷ ಕಾರಾಗೃಹ ವಾಸ, 5 ಸಾವಿರ ರೂ. ಗಳು ಜುಲ್ಮಾನೆ ವಿಧಿಸಬಹುದು. ಪ್ರವೇಶ ಪತ್ರದ ಜೆರಾಕ್ಸ್‍ಅನ್ನು ವಿದ್ಯಾರ್ಥಿಗಳು ಇಟ್ಟುಕೊಂಡಿರಬೇಕು. ಪ್ರವೇಶಪತ್ರ ಕಳೆದು ಹೋದರೆ ಪರೀಕ್ಷಾ ಕೇಂದ್ರದಲ್ಲಿ ಡೂಪ್ಲಿಕೇಟ್ ಹಾಲ್‍ಟಿಕೇಟ್ ಪಡೆಯಲು ಅವಕಾಶವಿದೆ.

ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರವು ವಿವಿಧ ರೀತಿಯ ಸೌಕರ್ಯ, ವಿದ್ಯಾರ್ಥಿ ವೇತನ ನೀಡುತ್ತದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಅವ್ಯವಹಾರ ಮಾಡಿ ಸಿಕ್ಕಿಬಿದ್ದರೆ ಆ ವಿದ್ಯಾರ್ಥಿ ಹೆಸರು, ಆ ಶಾಲೆಯ ಹೆಸರು ಅದೇ ದಿನ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಪ್ರಕಟವಾಗುತ್ತದೆ. ಆದ್ದರಿಂದ ಶಾಲೆಯ ಕೀರ್ತಿ, ಅಪಕೀರ್ತಿ, ಗೌರವಕ್ಕೆ ಮೂಲ ಕಾರಣ ಶಾಲಾ ವ್ಯವಸ್ಥೆ, ವಿದ್ಯಾರ್ಥಿಯ ನೈತಿಕ, ಪ್ರಾಮಾಣಿಕ ಹೊಣೆಗಾರಿಕೆಯಾಗಿದೆ.

# ಪೋಷಕರೇ ಗಮನಿಸಿ : 
ನಿಮ್ಮ ಮಗು ನಿಮ್ಮ ಸ್ನೇಹಿತ. ಮಗುವಿನ ಸಾಮಥ್ರ್ಯ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.  ಮಕ್ಕಳೊಂದಿಗೆ ವ್ಯವಹಾರಿಕತನ ಬೇಡ.
#ನಿಮ್ಮ ನಿರೀಕ್ಷೆ ಮಗುವಿನ ಸಾಮಥ್ರ್ಯಕ್ಕೆ ಅನುಗುಣವಾಗಿರಲಿ.  ಬೇರೆ ಮಕ್ಕಳೊಂದಿಗೆ, ಸಹೋದರ-ಸಹೋದರಿಯರೊಂದಿಗೆ ಹೋಲಿಕೆ ಮಾಡುವುದು ಉಚಿತವಲ್ಲ.

ಮಕ್ಕಳಲ್ಲಿ ಬಾಲ್ಯದಿಂದಲೇ ಕೆಲವಾದರೂ ಹವ್ಯಾಸಗಳನ್ನು ಕಲಿಯಲು ಅನುವು ಮಾಡಿಕೊಡಿ.  ಮಕ್ಕಳ ಅನಿಸಿಕೆಗಳನ್ನು ಆಲಿಸಿ, ಸ್ಪಂದಿಸಿ.
#ಮಕ್ಕಳು ವಿಫಲರಾದಾಗ ಟೀಕಿಸದೆ ಅವರಿಗೆ ಧೈರ್ಯ ತುಂಬಿ.  ಮುಂದೆ ನಡೆಯಲು ಪ್ರೋತ್ಸಾಹಿಸಿ, ಸಹಾಯ ಹಸ್ತ ನೀಡಿ.

ಮಕ್ಕಳೊಂದಿಗಿನ ಅನುಭವಕ್ಕೆ, ಸಕಾರಾತ್ಮಕವಾದ ಮಾರ್ಗದರ್ಶನ, ಸ್ನೇಹಪರತೆ ಎಂದಿಗೂ ಅವರನ್ನು ಆತ್ಮಹತ್ಯಾ ಆಲೋಚನೆಗೆ ತಳ್ಳದು.  #ಮಕ್ಕಳನ್ನು ಏಕಾಂಗಿಯಾಗಿರಲು ಹಾಗೂ ಹೆಚ್ಚಿನ ಸಮಯ ಟಿವಿ, ಇಂಟರ್‍ನೆಟ್‍ಗಳ ಮುಂದೆ ಕಳೆಯಲು ಬಿಡುವುದು ಬೇಡ.

ಆಫೀಸಿನ ಒತ್ತಡ, ಕೋಪಗಳನ್ನು ಮಕ್ಕಳ ಮೇಲೆ ಹೇರಬೇಡಿ. ಮಕ್ಕಳ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿ.  ಮಕ್ಕಳಲ್ಲಿ ಆದಷ್ಟೂ ಮಟ್ಟಿಗೆ ಆತ್ಮವಿಶ್ವಾಸ ಮೂಡಿಸಲು ಪ್ರಯತ್ನಪಡಿ.  ಹೊರಗಿನ ಆಹಾರ ಅದರಲ್ಲೂ ಬೇಕರಿ ಪದಾರ್ಥಗಳನ್ನು, ಹೆಚ್ಚಿನ ಪ್ರಮಾಣದಲ್ಲಿ ಪ್ರಿಸರ್ವೇಟಿವ್ ಬಳಸಿರುವ ತಿನಿಸುಗಳನ್ನು ಮಕ್ಕಳಿಗೆ ನಿತ್ಯ ನೀಡಬೇಡಿ.

ಸೂಕ್ಷ್ಮ ಮಾತುಗಳಲ್ಲಿ ಮತ್ತು ಒಳ್ಳೆಯ ರೀತಿಯಿಂದಲೇ ಮಕ್ಕಳಲ್ಲಿ ಉತ್ತರದಾಯಿತ್ವ ಬೆಳೆಸಿಕೊಳ್ಳುವುದನ್ನು ರೂಢಿಸಿ. ಮಕ್ಕಳು ಯಾರ ಜತೆ ಬೆರೆಯುತ್ತಾರೆ, ಏನು ನೋಡುತ್ತಾರೆ (ಟಿವಿ, ಕಂಪ್ಯೂಟರ್‍ನಲ್ಲಿ) ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ.  ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿಯರಿಗಿಂತ ಸ್ನೇಹಿತರೊಂದಿಗೆ ಮನಬಿಚ್ಚಿ ಮಾತನಾಡುವವರು ಬಹಳಷ್ಟು ಮಂದಿ ನೋವು-ನಲಿವು, ಯಶಸ್ಸು ವೈಫಲ್ಯ ಎಲ್ಲ ವಿಷಯಗಳನ್ನು ಗೆಳೆಯರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಹಲವು ಮಕ್ಕಳು ಇಚ್ಛಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸ್ನೇಹಿತರ ಜವಾಬ್ದಾರಿ ದೊಡ್ಡದು.

ತಮ್ಮ ಒಡನಾಡಿ ಸಂತೋಷದಿಂದ ಇರಲು ಏನು ಮಾಡಬಹುದು? ಇಲ್ಲಿವೆ ಕೆಲವು ಸಲಹೆ-ಸೂಚನೆಗಳು,  ಕಷ್ಟ-ಸುಖ ಹಂಚಿಕೊಂಡ ಸ್ನೇಹಿತರನ್ನು ಅಡ್ಡದಾರಿಗೆಳೆಯುವದಕ್ಕಿಂತ ಅವರ ಜೀವನದ ಬಂಡಿ ಹಳಿ ತಪ್ಪುವಂತೆ ಮಾಡಬೇಡಿ. ಗುಂಪಿನಲ್ಲಿರುವಾಗ ನಿರ್ದಿಷ್ಟ ಗೆಳೆಯರ ಬಗ್ಗೆ ಅಪಹಾಸ್ಯ ಮಾಡಬೇಡಿ. ನಿಮ್ಮ ಗೆಳೆಯ(ತಿ) ಖಿನ್ನರಾಗಿದ್ದಲ್ಲಿ ಅವರ ಗಮನ ಬೇರೆಡೆಗೆ ಸೆಳೆದು ನಂತರ ಸಮಾಧಾನ ಪಡಿಸುವುದು ಸೂಕ್ತ. ಗೆಳೆಯರನ್ನು ಖಿನ್ನತೆಯಿಂದ ಹೊರತರಲು ಪ್ರಯತ್ನಪಡಿ. ಸೂಕ್ಷ್ಮವಾಗಿ ತಿಳಿಹೇಳಿ. ,ಸಾಂತ್ವನದ ನುಡಿಗಳನ್ನಾಡಿ.

# ವಿದ್ಯಾರ್ಥಿಗಳೇ ನೆನಪಿಡಿ : 
ನಿಮ್ಮ ಒತ್ತಡಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಿ. ಯಾವ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಇದೆ.  ಒಮ್ಮೆ ನಿಮ್ಮ ನಿರೀಕ್ಷೆಯಲ್ಲಿ ವಿಫಲರಾದರೆ ಅದೇ ಕೊನೆ ಎಂದು ಎಂದೂ ಭಾವಿಸಬೇಡಿ.  ಸೋಲೇ ಗೆಲುವಿಗೆ ಸೋಪಾನ ಎಂಬುದನ್ನು ನೆನಪಿಡಿ.  ಸೋತಾಗ ನಕಾರಾತ್ಮಕ ಭಾವನೆಗೊಳಗಾಗಬೇಡಿ.
#ಸಕಾರಾತ್ಮಕವಾಗಿ ಸವಾಲನ್ನು ಎದುರಿಸಲು ಧೈರ್ಯ ತಂದುಕೊಳ್ಳಿ.

ಒಮ್ಮೆ ಪೋಷಕರು ಬೈದರೆ ಅದು ಅವಮಾನವೆಂದಣಿಸದೆ ಅದರ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಿ. ಜೀವನದಲ್ಲಿ ಕೌಶಲಗಳು, ಹವ್ಯಾಸಗಳು ಅವಶ್ಯ. ಅವಕ್ಕೇ ವೇಳೆ ಕೊಡಿ.  ಆತ್ಮೀಯ ಸ್ನೇಹಿತರೊಂದಿಗೆ ಚರ್ಚಿಸಿ, ಕೆಟ್ಟ ಚಟಗಳಿಗೆ ಬಲಿಯಾಗಬೇಡಿ.

– ಕೆ.ಎಸ್.ವಿಜಯ್‍ಕುಮಾರ್

Facebook Comments