ಉಗ್ರರ ವಿರುದ್ಧ ಪ್ರತಿಕಾರಕ್ಕೆ ಸರ್ವಪಕ್ಷಗಳ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.16- ಪುಲ್ವಾಮಾ ಭಯೋತ್ಪಾದಕರ ದಾಳಿಯನ್ನು ಅತ್ಯುಗ್ರವಾಗಿ ಖಂಡಿಸಿರುವ ಸರ್ವ ಪಕ್ಷಗಳು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಯೋಧರಿಗೆ ಸಂಪೂರ್ಣ ಬೆಂಬಲ ಘೋಷಿಸಿದೆ. ದೆಹಲಿಯಲ್ಲಿ ಇಂದು ನಡೆದ ಸರ್ವಪಕ್ಷಗಳ ಮಹತ್ವದ ಸಭೆಯಲ್ಲಿ ದೇಶದ ಏಕತೆ , ಸಮಗ್ರತೆ, ರಕ್ಷಣೆಗಾಗಿ ಹೋರಾಡುವ ನಿರ್ಣಯವನ್ನು ಒಕ್ಕೊರಲಿನಿಂದ ಅಂಗೀಕರಿಸಲಾಗಿದೆ.

ಗಡಿಯಾಚೆಯಿಂದ ಭಯೋತ್ಪಾದನೆಗೆ ನೀಡುತ್ತಿ ರುವ ಬೆಂಬಲವನ್ನು ಸಭೆಯಲ್ಲಿ ಉಗ್ರವಾಗಿ ಖಂಡಿಸಲಾಯಿತು. ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಜೈಷ್ ಉಗ್ರರು ದಾಳಿ ನಡೆಸಿ 40ಕ್ಕೂ ಹೆಚ್ಚು ಯೋಧರನ್ನು ಹತ್ಯೆ ಮಾಡಿದ ಕುಕೃತ್ಯದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಪರಾರ್ಮಶಿಸಿ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ಉಗ್ರರ ಅಟ್ಟಹಾಸಕ್ಕೆ ಎಲ್ಲಾ ಪಕ್ಷಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ ಪುಲ್ವಾಮಾಗೆ ಭೇಟಿ ನೀಡಿದ್ದ ಗೃಹಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸಂಸತ್ತಿನಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು. ಕಾಂಗ್ರೆಸ್ ಮುಖಂಡರಾದ ಗುಲಾಂ ನಬೀ ಅಜಾದ್, ಆನಂದ ಶರ್ಮಾ, ಜ್ಯೋತಿರಾದ್ಯಿತ ಸಿಂಧಿಯಾ, ತೃಣಮೂಲ ಕಾಂಗ್ರೆಸ್‍ನ ಸುದೀಪ್ ಬಂಡೋಪಾಧ್ಯಾಯ ಮತ್ತು ಡೆರೆಕ್ ಓಬ್ರಿಯಾಣ್, ಶಿವಸೇನೆಯ ಸಂಜಯ್ ರಾವತ್, ಟಿಆರ್‍ಎಸ್‍ನ ಜೀತೇಂದ್ರ ರೆಡ್ಡಿ, ಸಿಪಿಐನ ಡಿ.ರಾಜಾ, ನ್ಯಾಷನಲ್ ಕ್ಯಾನ್ಫರೆನ್ಸ್ ಮುಖಂಡ ಡಾ. ಫಾರೂಕ್ ಅಬ್ದುಲ್, ಎಲ್‍ಜೆಪಿಎಯ ರಾಮ್‍ವಿಲಾಸ್ ಪಾಸ್ವಾನ್, ಅಕಾಲಿ ದಳದ ನರೇಶ್ ಗುಜರಾಲ್, ಆರ್‍ಎಲ್‍ಎಸ್‍ಪಿ ಪಕ್ಷದ ಉಪೇಂದ್ರ ಖುಷ್ವಾ ಮತ್ತು ಜಯಪ್ರಕಾಶ್ ನಾರಾಯಣ್, ಐಎನ್‍ಎಲ್‍ಡಿ ಮುಖ್ಯಸ್ಥ ಉಭಯ ಸಿಂಗ್ ಚೌಟಾಲಾ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

ಭದ್ರತಾ ವೈಫಲ್ಯದಿಂದ ಯೋಧರ ಹತ್ಯೆ ನಡೆದಿದೆ ಎಂದು ಕೆಲವು ಪಕ್ಷದ ಮುಖಂಡರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮತ್ತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಶ್ರಯ ಪಡೆದಿರುವ ಉಗ್ರಗಾಮಿಗಳನ್ನು ಸದೆಬಡಿಯಲು ಮತ್ತೊಂದು ಸರ್ಜಿಕಲ್ ಸ್ಟ್ರೆಕ್ ನಡೆಸುವಂತೆ ಕೆಲವು ಮುಖಂಡರು ಸಲಹೆ ಮಾಡಿದರು.

ಪಾಕಿಸ್ತಾನವನ್ನು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪು ಮಾಡಲು ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಹಾಗೂ ಜೈಷ್-ಎ-ಮಹಮದ್ ಉಗ್ರಗಾಮಿ ಸಂಘಟನೆ ನಾಯಕ ಮೌಲಾನಾ ಮಸೂದ್ ಅಜರ್‍ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಿಸುವಂತೆ ರಾಜತಾಂತ್ರಿಕ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂಬ ಸಲಹೆಗಳು ಸಹ ಸಭೆಯಲ್ಲಿ ವ್ಯಕ್ತವಾಯಿತು.

ಪಾಕಿಸ್ತಾನವನ್ನು ಸೈನಿಕ, ಆರ್ಥಿಕ ಮತ್ತು ರಾಜತಾಂತ್ರಿಕ ಈ ಮೂರು ಕ್ರಮಗಳಿಂದ ಪಾಠ ಕಲಿಸುವ ಮೂಲಕ ಅದು ಮತ್ತೆ ಬಾಲಬಿಚ್ಚದಂತೆ ಮಾಡಬೇಕು ಎಂದು ಕೆಲವು ನಾಯಕರು ಸಲಹೆ ಮಾಡಿದರು. ನಂತರ ಮಾತನಾಡಿದ ಗೃಹಸಚಿವ ರಾಜನಾಥ್‍ಸಿಂಗ್ ಉಗ್ರಗಾಮಿಗಳ ಹುಟ್ಟಡ ಗಿಸಲು ಈಗಾಗಲೇ ಸೇನಾಪಡೆಗೆ ಸರ್ವಾಧಿಕಾರ ನೀಡಲಾಗಿದೆ. ಯೋಧರ ಜೀವ ತೆಗೆದ ಭಯೋದತ್ಪಾದಕರನ್ನು ಸುಮ್ಮನೆ ಬಿಡುವ ಪ್ರಶ್ನೆ ಇಲ್ಲ ಎಂದು ರಾಜನಾಥ್ ಸಿಂಗ್ ಪುನರುಚ್ಚರಿಸಿದರು.

Facebook Comments