ಬೆಂಗಳೂರಲ್ಲಿ ಬಿಎಚ್‍ಇಎಲ್ ಮಹಿಳಾ ಉದ್ಯೋಗಿಯ ಬರ್ಬರ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.16- ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಬಿಎಚ್‍ಇಎಲ್ ಮಹಿಳಾ ಉದ್ಯೋಗಿಯ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸನ್‍ಸಿಟಿ ನಿವಾಸಿ ಅನು (32) ಕೊಲೆಯಾದ ಉದ್ಯೋಗಿ.

ಸನ್‍ಸಿಟಿಯಲ್ಲಿ ಒಟ್ಟು ಆರು ಮನೆಯಿರುವ ಕಟ್ಟಡದ ಮೊದಲ ಮಹಡಿಯಲ್ಲಿ ಅನು ವಾಸವಿದ್ದರೆ, ಮೂರನೇ ಮಹಡಿಯಲ್ಲಿ ಇವರ ಅಕ್ಕ ವಾಸವಾಗಿದ್ದಾರೆ.
ರಾತ್ರಿ 8 ಗಂಟೆ ಸಮಯದಲ್ಲಿ ಅನು ಅವರು ಮನೆಯಲ್ಲಿ ಒಬ್ಬರೇ ಇದ್ದರು. ಈ ಸಂದರ್ಭದಲ್ಲಿ ಇವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅನು ಅವರ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ರಾತ್ರಿ ಅನು ಅವರ ಪತಿ ಮೊಬೈಲ್‍ಗೆ ಕರೆ ಮಾಡಿದಾಗ ಸ್ವೀಕರಿಸದ ಕಾರಣ ಅದೇ ಕಟ್ಟಡದ 3ನೇ ಮಹಡಿಯಲ್ಲಿರುವ ಅನು ಅವರ ಅಕ್ಕನಿಗೆ ಕರೆ ಮಾಡಿದ್ದಾರೆ.
ತಕ್ಷಣ ಅನು ಅವರ ಅಕ್ಕ ಮನೆ ಬಳಿ ಹೋಗಿ ನೋಡಿದಾಗ ಬಾಗಿಲು ಹಾಕಿರುವುದು ಗಮನಿಸಿ ಸಂಬಧಿಕರನ್ನು ವಿಚಾರಿಸಿದರೂ ಅನು ಅವರು ಪತ್ತೆಯಾಗಲಿಲ್ಲ.

ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಅನು ಕೊಲೆಯಾಗಿರುವುದು ಕಂಡು ಬಂದಿದೆ. ತಕ್ಷಣ ಕೆಂಗೇರಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿವೇಶನ ವಿವಾದ ವಿಚಾರದಲ್ಲಿ ಈ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕೊಲೆ ಆರೋಪಿಗಳಿಗಾಗಿ ತನಿಖೆ ಕೈಗೊಂಡಿದ್ದಾರೆ.

Facebook Comments