ಕುಡಿಯುವ ನೀರಿನ ಸಮಸ್ಯೆ ಪರಿಶೀಲಿಸಿದ ಜಿಪಂ ಸಿಇಒ

ಈ ಸುದ್ದಿಯನ್ನು ಶೇರ್ ಮಾಡಿ

ಕಡೂರು, ಫೆ.16- ತಾಲ್ಲೂಕಿನ ಮಲ್ಲೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಿನ ಸಮಸ್ಯೆಯ ಕುರಿತು ಗ್ರಾಮಸ್ಥರ ಹಲವು ದೂರಿನ ಮೇರೆಗೆ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದರು.

ಪಂಚಾಯತಿಯಲ್ಲಿ ನರೇಗಾ ಮತ್ತಿತರ ಕಾರ್ಯಕ್ರಮಗಳು ಸಮರ್ಪಕವಾದ ಅನುಷ್ಠಾನ ವಿಳಂಬದ ಬಗ್ಗೆ ಅಭಿವೃದ್ದಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಪಂಚಾಯಿತಿ ವ್ಯಾಪ್ತಿಯ ಮಚ್ಚೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿ ಒಂದು ತಿಂಗಳಾಗಿದೆ. ಇದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದಾಗ ಸ್ಥಳದಲ್ಲಿದ್ದ ಅಧಿಕಾರಿಗಳು ಸಮರ್ಪಕ ಉತ್ತರ ನೀಡದೆ ತಡಬಡಾಯಿಸಿದರು.

ಗ್ರಾಮದಲ್ಲಿ ಖಾಸಗಿ ಕೊಳವೆ ಬಾವಿಯಿಂದ ನೀರು ಪಡೆಯುತ್ತಿದ್ದು, ಅವರಿಗೆ ಹಣ ಸಂದಾಯ ಮಾಡಿಲ್ಲ. ಮತ್ತು ಈ ಹಿಂದೆ ಟ್ಯಾಂಕರ್ ನಲ್ಲಿ ನೀರು ಸರಬರಾಜು ಮಾಡಿದವರಿಗೆ ಹಣ ನೀಡಿಲ್ಲ ಎಂದು ತಿಳಿದು ಕೂಡಲೇ ತಾಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ನಯನ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಬಿಡುಗಡೆಯಾಗಿರುವ ಹಣವನ್ನು ಪಾವತಿ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದರು.

ನಂತರ ಮಚ್ಚೇರಿ ಗ್ರಾಮಕ್ಕೆ ಭೇಟಿ ನೀಡಿದ ಸತ್ಯಭಾಮ, ಕಾರ್ಯಾರಂಭ ಮಾಡದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪರಿಶೀಲಿಸಿದರು. ಇಲ್ಲಿನ ಜಾನುವಾರು ತೊಟ್ಟಿಗಳಿಗೆ ನೀರಿನ ವ್ಯವಸ್ಥೆ ಮಾಡಿ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹೇಳಿದರು.  ಗ್ರಾ.ಪಂ. ಸದಸ್ಯ ಶೂದ್ರ ಶ್ರೀನಿವಾಸ್, ವ್ಯವಸ್ಥಾಪಕ ವಿಜಯ್ ಕುಮಾರ್ ಮತ್ತು ಗ್ರಾಮಸ್ಥರು ಇದ್ದರು.

Facebook Comments