ಮೊದಲ ಅಸ್ತ್ರ ಪ್ರಯೋಗಿಸಿದ ಭಾರತ, ಪಾ(ಪಿ)ಕಿಗಳಿಗೆ ಶುರುವಾಯ್ತು ತಳಮಳ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.16- ಕಾಶ್ಮೀರ ಕಣಿವೆಯ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕರ ಅಟ್ಟಹಾಸಕ್ಕೆ ವಿಶ್ವಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವ ನಡುವೆಯೇ ಈ ಕುಕೃತ್ಯಕ್ಕೆ ಕುಮ್ಮಕ್ಕು ನೀಡಿದ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಮೂಲೆಗುಂಪು ಮಾಡುವ ಯತ್ನವನ್ನು ಭಾರತ ಮತ್ತಷ್ಟು ತೀವ್ರಗೊಳಿಸಿದೆ.

ಇದಕ್ಕಾಗಿ 25ಕ್ಕೂ ಹೆಚ್ಚು ದೇಶಗಳ ಬೆಂಬಲವನ್ನು ಭಾರತ ಕೋರಿದ್ದು , ಆ ದೇಶಗಳ ವಿದೇಶಾಂಗ ಇಲಾಖೆಯೊಂದಿಗೆ ಮಹತ್ವದ ಮಾತುಕತೆ ನಡೆಸಿದೆ. ಭಯೋತ್ಪಾದನೆಯನ್ನು ಬೆಂಬಲಿಸುವ ತನ್ನ ಚಾಳಿಯನ್ನು ಬಿಡದ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯನ್ನಾಗಿ ಮಾಡಬೇಕೆಂದು ಪ್ರಧಾನಿ ಮೋದಿ ಪದೇ ಪದೇ ಹೇಳುತ್ತಿದ್ದರು. ಭಾರತ ಈ ನಿಟ್ಟಿನಲ್ಲಿ ಅಲ್ಪ ಮಟ್ಟಿಗೆ ಯಶಸ್ಸು ಸಾಧಿಸಿದೆ.

ಈಗ ಪುಲ್ವಾಮ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರ ಪಾಕ್‍ನ್ನು ಒಂಟಿಯನ್ನಾಗಿಸುವುದಕ್ಕೆ ಮತ್ತಷ್ಟು ತೀವ್ರವಾದ ಪ್ರಯತ್ನ ಮುಂದುವರೆಸಿದೆ. ಪುಲ್ವಾಮ ಘಟನೆಯಾದ ಬೆನ್ನಲ್ಲೇ  ಪಾಕ್‍ಗೆ ಕಠಿಣ ಸಂದೇಶ ರವಾನೆ ಮಾಡಿರುವ ಭಾರತ ಈಗ ಸದ್ದಿಲ್ಲದೆ ಪಾಕಿಸ್ತಾನಕ್ಕೆ ಪಾಠ ಕಲಿಸುವ ತಯಾರಿ ನಡೆಸುತ್ತಿದೆ.

ರಾಜತಾಂತ್ರಿಕ ನಡೆಯ ಮೂಲಕ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯನ್ನಾಗಿ ಮಾಡುವುದಕ್ಕೆ ಸಾಧ್ಯವಿರುವ ಎಲ್ಲಾ ಅಸ್ತ್ರಗಳನ್ನೂ ಭಾರತ ಪ್ರಯೋಗಿಸುತ್ತಿದ್ದು ಪಿ-5 (ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯತ್ವ ಹೊಂದಿರುವ ರಾಷ್ಟ್ರಗಳು) ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಪುಲ್ವಾಮ ದಾಳಿ ಪಾಕಿಸ್ತಾನ ಬೆಂಬಲಿತ, ಪ್ರೇರಿತ ಉಗ್ರ ಸಂಘಟನೆಯ ಕೃತ್ಯ ಎಂಬುದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ.

ಚೀನಾ, ಜಪಾನ್, ಅಮೆರಿಕ, ಯುರೋಪಿಯನ್ ಯೂನಿಯನ್, ಜರ್ಮನಿ, ದಕ್ಷಿಣ ಕೋರಿಯಾ, ಇಸ್ರೇಲ್ , ರಷ್ಯಾ, ಬ್ರಿಟನ್, ಕೆನಡಾ, ಫ್ರಾನ್ಸ್, ಸ್ಪೇನ್, ಭೂತಾನ್, ನೆರೆ ರಾಷ್ಟ್ರಗಳಾದ ಬಾಂಗ್ಲಾ, ಶ್ರೀಲಂಕಾ, ಆಫ್ಘಾನಿಸ್ತಾನ, ನೇಪಾಳ ಸೇರಿದಂತೆ 25 ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಭಾರತದ ವಿದೇಶಾಂಗ ಇಲಾಖೆ ಮಾತನಾಡಿದೆ.

ಜಗತ್ತಿನ ಪ್ರಬಲ ರಾಷ್ಟ್ರಗಳ ಪ್ರತಿನಿಧಿಗಳೆದುರು ಪುಲ್ವಾಮ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವುದನ್ನು ಭಾರತದ ವಿದೇಶಾಂಗ ಕಾರ್ಯದರ್ಶಿಗಳಾದ ವಿಜಯ್ ಗೋಯಲ್ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಷ್ಟೇ ಅಲ್ಲದೇ ಪಾಕ್ ಕೃತ್ಯದ ಬಗ್ಗೆ ಎಲ್ಲಾ ಪ್ರತಿನಿಧಿಗಳಿಗೂ ಸ್ಪಷ್ಟವಾಗಿ ಮನವರಿಕೆಯಾಗಿದ್ದು, ಭಾರತದ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಿವೆ ಎಂಬ ವಿಶ್ವಾಸ ಮೂಡಿದೆ. ಜಗತ್ತಿನ ಪ್ರಬಲ ರಾಷ್ಟ್ರಗಳೆದುರು ಭಾರತ-ಪಾಕ್ ಕೃತ್ಯವನ್ನು ಮನವರಿಕೆ ಮಾಡಿರುವುದರಿಂದ, ಈಗಾಗಲೇ ಆರ್ಥಿಕ ಮುಗ್ಗಟ್ಟಿನಿಂದ ತೀವ್ರ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವುದು ನಿಶ್ಚಿತವಾಗಿದೆ.

Facebook Comments

Sri Raghav

Admin