ಮೇಲುಕೋಟೆ ದೇವಾಲಯಕ್ಕೆ ಮಹಾರಾಜ ಯಧುವೀರ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಮೇಲುಕೋಟೆ , ಫೆ.16- ಮೈಸೂರು ರಾಜ ವಂಶಸ್ಥ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಮೈಸೂರು ಅರಮನೆಯಿಂದ ಪೂಜಾ ಸಾಮಗ್ರಿಗಳೊಂದಿಗೆ ನಿನ್ನೆ ಸಂಜೆ 5.30ರ ವೇಳೆಗೆ ಮೇಲುಕೋಟೆಗೆ ಆಗಮಿಸಿದ ಯಧುವೀರರನ್ನು ದೇವಾಲಯದ ವತಿಯಿಂದ ಪೂರ್ಣಕುಂಭ ಮತ್ತು ಶಠಾರಿ ಮರ್ಯಾದೆಯೊಂದಿಗೆ ಅನೂಚಾನ ಸಂಪ್ರದಾಯದಂತೆ ಸ್ವಾಗತಿಸಲಾಯಿತು.

ದೇವಾಲಯದಲ್ಲಿ ಮೂಲಮೂರ್ತಿ ಶ್ರೀ ಚೆಲುವನಾರಾಯಣಸ್ವಾಮಿ, ಯದುಗಿರಿ ನಾಯಕಿ ಅಮ್ಮನವರು, ಬದರೀನಾರಾಯಣಸ್ವಾಮಿ ಮತ್ತು ಭಗವದ್ರಾಮಾನುಜಾಚಾರ್ಯರ ದರ್ಶನ ಪಡೆದರು.

ಇದೇ ವೇಳೆ ದೇವಾಲಯದ ಒಳಭಾಗದಲ್ಲಿರುವ ರಾಜ ಒಡೆಯರ್ ಹಾಗೂ ಪಾತಾಳಾಂಕಣದಲ್ಲಿರುವ ಮುಮ್ಮುಡಿ ಶ್ರೀ ಕೃಷ್ಣರಾಜ ಒಡೆಯರ್ ಭಕ್ತ ವಿಗ್ರಹಗಳಿಗೆ ಪೂಜೆ ಸಲ್ಲಿಸಿದರು.

ನಂತರ ಯತಿರಾಜ ದಾಸರ್, ಶ್ರೀನಿವಾಸ ನರಸಿಂಹನ್ ಗುರೂಜಿ ಗುರುಪೀಠಕ್ಕೆ ಭೇಟಿ ನೀಡಿ ವಿಜಯಲಕ್ಷ್ಮಿ ಅಮ್ಮನವರು ಮತ್ತು ಪುರಾತನ ಸುದರ್ಶನ ಚಕ್ರದ ದರ್ಶನ ಪಡೆದರು. ನಂತರ ಅನ್ನದಾನ ಸಭಾಂಗಣಕ್ಕೆ ಆಗಮಿಸಿ ವಿವರ ಪಡೆದು ಸಂತಸ ವ್ಯಕ್ತಪಡಿಸಿದರು.

ಯಧುವೀರ್ ಒಡೆಯರಿಗೆ ಮಾರ್ಚ್ 17ರಂದು ರಾತ್ರಿ ನಡೆಯುವ ಪ್ರಖ್ಯಾತ ವೈರಮುಡಿ ಉತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಯಿತು.
ರಾಜಮಾತೆ ಪ್ರಮೋದಾದೇವಿ, ತ್ರಿಷಿಕಾ ಹಾಗೂ ಪುತ್ರನೊಂದಿಗೆ ದೇವಾಲಯಕ್ಕೆ ಆಗಮಿಸಿದ ಯಧುವೀರ್ ವೈರಮುಡಿ ಉತ್ಸವ ದರ್ಶನ ಪಡೆದು ಯತಿರಾಜ ದಾಸರ್ ಗುರುಪೀಠದಲ್ಲೇ ಪ್ರಸಾದ ಸ್ವೀಕರಿಸುವುದಾಗಿ ಸಂಕಲ್ಪ ಮಾಡಿದರು.

ನಂತರ ಕಲ್ಯಾಣಿಗೆ ತೆರಳಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡು ಬೆಟ್ಟದೊಡೆಯ ಶ್ರೀ ಯೋಗಾನರಸಿಂಹಸ್ವಾಮಿಯ ದರ್ಶನ ಪಡೆದು ಸೂರ್ಯಾಸ್ತದ ಸೊಬಗು ಆಸ್ವಾದಿಸಿ ಮೈಸೂರಿಗೆ ತೆರಳಿದರು.

Facebook Comments