ವಿವಿಧ ಠಾಣೆಗಳಿಗೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ, ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಫೆ.16-ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ರಾತ್ರೋರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಭೇಟಿ ನೀಡಿದ್ದು, ಅವ್ಯವಸ್ಥೆ ಕಂಡು ದಂಗಾದ ಪ್ರಸಂಗ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದರ ಬೆನ್ನಲ್ಲೇ ರಾತ್ರಿ ಕೂಡ ಠಾಣೆಗಳಿಗೆ ಭೇಟಿ ನೀಡಿದ ಎಸ್‍ಪಿ ಅವರು ಪರಿಶೀಲನೆ ನಡೆಸಿದ್ದಾರೆ.

ಕ್ಯಾತಸಂದ್ರ ಪೊಲೀಸ್ ಠಾಣೆಗೆ ರಾತ್ರಿ 1.30ರಲ್ಲಿ ಭೇಟಿ ನೀಡಿದಾಗ ಸಿಬ್ಬಂದಿಗಳು ನಿದ್ದೆಗೆ ಜಾರಿದ್ದರು. ಎಸ್‍ಪಿ ಅವರು ಠಾಣೆಗೆ ಬಂದರೂ ಯಾರೂ ಕೂಡ ಎಚ್ಚರಗೊಳ್ಳಲಿಲ್ಲ. ನಂತರ ಅಲ್ಲಿಂದಲೇ ಕಂಟ್ರೋಲ್ ರೂಂಗೆ ದೂರವಾಣಿ ಕರೆ ಮಾಡಿದರೂ ಅದಕ್ಕೂ ಯಾವ ಸಿಬ್ಬಂದಿಯೂ ಪ್ರತಿಕ್ರಿಯಿಸಲಿಲ್ಲ. ನಂತರ ಕೆಲ ಕಡತಗಳನ್ನು ತೆಗೆದುಕೊಂಡು ಠಾಣೆ ಬಾಗಿಲು ಹಾಕಿಕೊಂಡು ಅಲ್ಲಿಂದ ಹೊರ ನಡೆದಿದ್ದಾರೆ.

ಅಲ್ಲಿಂದ ಹೊಸ ಬಡಾವಣೆ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಅಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಮೊನ್ನೆ ರಾತ್ರಿ ಕಳ್ಳಂಬೆಳ್ಳ ಠಾಣೆಗೆ ಭೇಟಿ ನೀಡಿದಾಗ ಮರಳು ಲಾರಿಯೊಂದನ್ನು ಸಿಬ್ಬಂದಿಗಳು ಹಿಡಿದಿದ್ದು, ಲಾರಿಯಲ್ಲಿ ಏನಿದೆ ಎಂದು ಹೆಡ್‍ಕಾನ್ಸ್‍ಸ್ಟೆಬಲ್ ಅವರನ್ನು ಎಸ್‍ಪಿ ಅವರು ಪ್ರಶ್ನಿಸಿದ್ದಾರೆ.ಈ ವೇಳೆ ಹೆಡ್‍ಕಾನ್ಸ್‍ಸ್ಟೆಬಲ್ ಅವರು, ಏನೂ ಇಲ್ಲ ಸರ್… ಖಾಲಿ ಲಾರಿ ಎಂದು ಉತ್ತರ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ಎಸ್‍ಪಿ ತನ್ನ ವಾಹನ ಚಾಲಕನಿಗೆ ಲಾರಿಯನ್ನು ತಪಾಸಣೆ ಮಾಡಲು ತಿಳಿಸುತ್ತಾರೆ. ಆಗ ಅದರಲ್ಲಿ ಮರಳಿರುವುದು ಕಂಡು ಬಂದಿದೆ.ಈ ಸುಳ್ಳನ್ನು ಕೇಳಿ ಎಸ್‍ಪಿ ಕೆಲ ಕಾಲ ದಂಗಾಗಿ ಹೋದರು.

ಠಾಣೆಗೆ ಪ್ರವೇಶಿಸಿದಾಗ ಸಿಬ್ಬಂದಿ ಕರ್ತವ್ಯದಲ್ಲಿ ಯಾರೂ ಇರಲಿಲ್ಲ. ಕಳೆದ 13 ರಂದು ರಾತ್ರಿ ಗಸ್ತಿನಲ್ಲಿ ಕೆಲವು ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ಠಾಣಾಧಿಕಾರಿಗಳು ಮತ್ತು ಠಾಣೆ ಪಹರೆ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಮಲಗಿರುವುದು ಕಂಡು ಬರುತ್ತದೆ.

ಹಾಗೂ ಗಸ್ತಿನಲ್ಲಿದ್ದ ಉಸ್ತುವಾರಿ ಅಧಿಕಾರಿಗಳು ಸುಳ್ಳು ಲೋಕೇಷನ್‍ಗಳು ನೀಡುವುದು ಹಾಗೂ ಕಾಲಾವಧಿಗಿಂತ ಮುಂಚಿತವಾಗಿ ರಾತ್ರಿಗಸ್ತಿನಿಂದ ವಿಶ್ರಾಂತಿಗೆ ತೆರಳಿರುವುದು ಕಂಡು ಬಂದಿರುತ್ತದೆ. ಇನ್ನು ಮುಂದೆ ಅನಿರೀಕ್ಷಿತ ಭೇಟಿ ನೀಡಿದಾಗ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯತೆ ಕಂಡು ಬಂದಲ್ಲಿ ಕೂಡಲೇ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಜಡ್ಡುಗಟ್ಟಿದ್ದ ಜಿಲ್ಲಾ ಪೊಲೀಸ್ ಆಡಳಿತಕ್ಕೆ ಎಸ್‍ಪಿ ಅವರು ಚುರುಕು ಮುಟ್ಟಿಸಿದ್ದಾರೆ.

Facebook Comments