ಆಡಿಯೋ ಪ್ರಕರಣದಲ್ಲಿ ಕುಮಾರಸ್ವಾಮಿಯವರನ್ನು ಸಿಲುಕಿಸಲು ಸಿದ್ದರಾಮಯ್ಯ ಪ್ಲಾನ್ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಫೆ.17- ಯಡಿಯೂರಪ್ಪ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆ ಮಾಡೇ ಮಾಡ್ತೀವಿ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆ ನಡೆಸಲು ಅವರ್ಯಾರು ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಆಡಿಯೋ ಪ್ರಕರಣವನ್ನು ಸಿದ್ದರಾಮಯ್ಯ ಬಹಳ ಒತ್ತಾಯ ಮಾಡಿ ಎಸ್‍ಐಟಿ ನೇಮಕ ಮಾಡಿಸಿದ್ದಾರೆ.

ಇದಕ್ಕೆ ಸಿಎಂ ಕುಮಾರಸ್ವಾಮಿ ಅವರು ಸ್ಪೀಕರ್ ರಮೇಶ್‍ಕುಮಾರ್ ಅವರ ತೀರ್ಮಾನಕ್ಕೆ ಬದ್ಧ ಎಂದಿದ್ದರು. ಆದರೆ, ಎಸ್‍ಐಟಿ ತನಿಖೆ ಮಾಡೇ ಮಾಡ್ತೀವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಎಸ್‍ಐಟಿ ಘೋಷಣೆ ಮಾಡಲು ಅವರ್ಯಾರು ಎಂದು ಈಶ್ವರಪ್ಪ ಹೇಳಿದರು.

ಆಡಿಯೋ ಪ್ರಕರಣದಲ್ಲಿ ಕುಮಾರಸ್ವಾಮಿ ಅವರನ್ನು ಸಿಲುಕಿಸಬೇಕೆಂಬುದು ಸಿದ್ದರಾಮಯ್ಯನವರ ಉದ್ದೇಶವಾಗಿದೆ. ಫೋನ್ ಕದ್ದಾಲಿಕೆ ಮಾಡಿರುವುದಾಗಿ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ.

ಚಾಮುಂಡೇಶ್ವರಿಯ ಸೋಲಿನ ಸೇಡು ತೀರಿಸಿಕೊಳ್ಳಲು ಜೆಡಿಎಸ್ ವಿರುದ್ಧ ಹಗೆ ಸಾಧಿಸುತ್ತಿದ್ದಾರೆ. ಸಿದ್ದರಾಮಯ್ಯಗೆ ಸಮ್ಮಿಶ್ರ ಸರ್ಕಾರ ಇರುವುದು ಬೇಕಿಲ್ಲ. ಜೆಡಿಎಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ.

ಹೀಗಾಗಿಯೇ ಶನಿ, ರಾಹು, ಕೇತು ಎಲ್ಲರೂ ಒಟ್ಟಿಗೇ ಸೇರಿಕೊಂಡು ನನ್ನನ್ನು ಸೋಲಿಸಿದರು ಎಂದು ಗಂಭೀರ ಆರೋಪ ಮಾಡಿದ್ದರು ಎಂದ ಅವರು ಎಸ್‍ಐಟಿ ತನಿಖೆಯಲ್ಲಿ ಯಾರು ತಪ್ಪಿತಸ್ಥರಾಗುತ್ತಾರೆ ಎಂಬುದನ್ನು ಕಾದು ನೋಡೋಣ ಎಂದರು.

ರಾಜ್ಯದಲ್ಲಿ ಬಿಜೆಪಿಗೆ ಬಹುಮತವಿಲ್ಲದೆ ಹೋದರೂ ಕಾಂಗ್ರೆಸ್‍ನಲ್ಲಿ ಅತೃಪ್ತರಿದ್ದಾರೆ. ಅವರು ಏನು ಮಾಡುತ್ತಾರೆ ನೋಡೋಣ. ಯಾವುದೇ ಕಾಂಗ್ರೆಸ್ ಶಾಸಕರು ಬಿಜೆಪಿಯವರು ಹಿಡಿದಿಟ್ಟಿದ್ದಾರೆ ಎಂದು ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ಮೇಲೆ ಅತೃಪ್ತಿ ಇದೆ ಎಂದು ಹೇಳಿದ್ದಾರೆ. ಅತೃಪ್ತರು ಯಾವಾಗ ಹೊರಬರುತ್ತಾರೆ ಎಂಬುದನ್ನು ನೋಡಬೇಕು.

ಹೀಗಾಗಿ ಸರ್ಕಾರ ಎಲ್ಲಿಯವರೆಗೆ ಇರುತ್ತದೆಯೋ ಗೊತ್ತಿಲ್ಲ. ಅವರ ಸಂಖ್ಯೆ ಕಡಿಮೆಯಾದಾಗ ನಾವು ಹೊಸ ಸರ್ಕಾರ ರಚನೆ ಮಾಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆಯಿಂದ ನಮಗೇನೂ ಸಮಸ್ಯೆಯಿಲ್ಲ. ರಾಜ್ಯದ 22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಉಗ್ರರಿಗೆ ತಕ್ಕ ಶಾಸ್ತಿ: ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯನ್ನು ಇಡೀ ದೇಶವೇ ಖಂಡಿಸಿದೆ. ಪಕ್ಷ, ಜಾತಿ ಭೇದ ಮರೆತು ಎಲ್ಲರೂ ಒಂದಾಗಿದ್ದು ಸಂತೋಷವಾಗಿದೆ. ಈ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ದೇಶದ ಜನ ಪ್ರಧಾನಿಗಳ ಜತೆ ನಿಂತಿದ್ದಾರೆ ಎಂದು ಅವರು ಹೇಳಿದರು.

Facebook Comments

Sri Raghav

Admin