ಹುತಾತ್ಮ ಗುರು ಕುಟುಂಬಕ್ಕೆ ಸಾಂತ್ವನ ಹೇಳದ ಡಿಕೆ ಬ್ರದರ್ಸ್ ವಿರುದ್ಧ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ಕನಕಪುರ, ಫೆ.17- ಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪುರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಗುರು ಅವರ ಪತ್ನಿ ಕಲಾವತಿ ತಾಲ್ಲೂಕಿನ ಸಾಸಲಾಪುರ ಗ್ರಾಮದವರಾದರೂ ಕೂಡ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಆಗಲಿ ತಮ್ಮ ಕ್ಷೇತ್ರದ ಹೆಣ್ಣು ಮಗಳಿಗೆ ಸಾಂತ್ವನ ಹೇಳಲಿಲ್ಲ ಎಂದು ಬಹುಜನ ಸಮಾಜ ಪಕ್ಷದ ಕಾರ್ಯದರ್ಶಿ ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರವನ್ನು ಉಳಿಸಿಕೊಳ್ಳಲು ನಮ್ಮ ರಾಜ್ಯದಿಂದ ಬೇರೆ ರಾಜ್ಯದವರೆಗೆ ಹೋಗುವ ಡಿಕೆ ಸಹೋದರರು ತಮ್ಮದೇ ಕ್ಷೇತ್ರದ ಹೆಣ್ಣು ಮಗಳು ಹಾಗೂ ಆಕೆಯ ಮನೆಯವರು ದುಃಖದಲ್ಲಿದ್ದರೂ ಇತ್ತ ತಿರುಗಿ ನೋಡಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರು ಅವರ ಅಂತ್ಯಕ್ರಿಯೆಲ್ಲಿ ಡಿಕೆ ಸಹೋದರರು ಭಾಗವಹಿಸಲಿಲ್ಲ. ಇತ್ತ ಸಾಸಲಾಪುರಕ್ಕೂ ಭೇಟಿ ನೀಡಿ ಕಲಾವತಿ ಹಾಗೂ ಮನೆಯವರಿಗೆ ಸಾಂತ್ವನ ಹೇಳಿ ಅವರೊಂದಿಗೆ ತಾವಿರುವುದಾಗಿ ಭರವಸೆ ನೀಡಬಹುದಿತ್ತು.

ಆದರೆ, ಈತನಕ ಈ ಯಾವ ಕೆಲಸವನ್ನೂ ಇವರು ಮಾಡಿಲ್ಲ. ಅವರಿಗೆ ಸರ್ಕಾರ ಉಳಿಸಿಕೊಳ್ಳುವುದೇ ಮುಖ್ಯ ಎಂದು ಟೀಕಿಸಿದ್ದಾರೆ. ಕಲಾವತಿ ಬಡ ಕುಟುಂಬದವರಾಗಿದ್ದು, ಪತಿಯನ್ನು ಕಳೆದುಕೊಂಡು ಆಕೆ ದುಃಖದಲ್ಲಿದ್ದಾರೆ.

ಆಕೆಗೆ ಧನ ಸಹಾಯ ಮಾಡಬೇಕಾಗಿತ್ತು. ಇಲ್ಲವೇ ಸರ್ಕಾರಿ ಭೂಮಿಯನ್ನಾದರೂ ಕೊಡಬೇಕು. ಆದರೆ, ಡಿ.ಕೆ.ಶಿವಕುಮಾರ್ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಈಗಲಾದರೂ ಅವರು ಸ್ಪಂದಿಸಿ ಸಹಾಯ ಹಸ್ತ ನೀಡಲಿ ಎಂದು ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.

Facebook Comments

Sri Raghav

Admin