ಬಿದಿರೂ ಸಿಗ್ತಿಲ್ಲ, ವ್ಯಾಪಾರವೂ ಇಲ್ಲ : ಬುಟ್ಟಿ ಹೆಣೆಯುವವರ ಬದುಕು ಮೂರಾಬಟ್ಟೆ

ಈ ಸುದ್ದಿಯನ್ನು ಶೇರ್ ಮಾಡಿ

ಹುಟ್ಟಿನಿಂದ ಸಾಯುವ ತನಕ ಬಿದಿರು ಎಲ್ಲರಿಗೂ ಅಗತ್ಯ. ಹುಟ್ಟುತ್ತ ಹುಲ್ಲಾದೆ ಬೆಳೆಯುತ್ತ ಮರವಾದೆ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರಿಗೂ ತೂಗುವ ತೊಟ್ಟಿಲಾದೆ ಸತ್ತಾಗ ಚಟ್ಟವಾದೆ ಇದೇ ರೀತಿ ಹುಟ್ಟಿನಿಂದ ಸಾಯುವವರೆಗೂ ನಾನು ಬೇಕು ಎಂದು ಬಿದಿರು ಹೇಳುತ್ತದೆ.

ಬಿದಿರಿನ ಉತ್ಪನ್ನಗಳಿಗೆ ಬೇಡಿಕೆ ಕುಸಿಯುತ್ತಿರುವುದರಿಂದ ಬುಟ್ಟಿ ಹೆಣೆದು ಜೀವನದ ಬಂಡಿ ಸಾಗಿಸುತ್ತಿರುವವರ ಸ್ಥಿತಿ ಈಗ ಅತಂತ್ರವಾಗಿದೆ. ಅವರು ಕುಲಕಸುಬನ್ನು ತೊರೆಯುವ ಅನಿವಾರ್ಯ ಸ್ಥಿತಿಗೆ ತಲುಪಿದ್ದಾರೆ.

ಹುಣಸೂರಿನ ಕಲ್ಕುಣಿಕೆಯ ಮೇದರ ಬೀದಿಗಳಲ್ಲಿ 120ಕ್ಕೂ ಹೆಚ್ಚು ಕುಟುಂಬಗಳು ಸುಮಾರು 60 ವರ್ಷಗಳಿಂದ ಬಿದಿರಿನಿಂದ ಬುಟ್ಟಿ, ಪಂಜರ, ಬೀಸಣಿಗೆ, ಮೊರ, ಮಂಕರಿ, ಹೆಜ್ಜಿಗೆ ಮತ್ತಿತರ ಸಾಮಗ್ರಿಗಳನ್ನು ತಯಾರಿಸುತ್ತಿದ್ದರು. ಅವುಗಳನ್ನು ಸಂತೆಗಳಲ್ಲಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು.

ಆದರೆ, ಇತ್ತೀಚಿನ ದಿನಗಳಲ್ಲಿ ಬಿದಿರು ಉತ್ಪನ್ನಗಳಿಗೆ ಪರ್ಯಾಯವಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗಿದೆ. ಬಿದಿರು ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲವಾಗಿದೆ. ಇದರಿಂದ ನೂರಾರು ಕುಟುಂಬಗಳ ಆದಾಯಕ್ಕೆ ಕತ್ತರಿ ಬಿದ್ದಿದೆ.

ಇತ್ತೀಚಿನ ದಿನಗಳಲ್ಲಿ ಬಿದಿರು ಸಿಗುತ್ತಿಲ್ಲ. ಕೊಡಗು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ದುಪ್ಪಟ್ಟು ಹಣ ಕೊಟ್ಟು ಬಿದಿರನ್ನು ತರಿಸಿಕೊಳ್ಳಬೇಕಾಗಿದೆ. ಇವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳೂ ಸಿಗುತ್ತಿಲ್ಲ. ಇತ್ತ ವ್ಯಾಪಾರವೂ ಇಲ್ಲ, ಬಿದಿರೂ ಸಿಗುತ್ತಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಸ್ಥಿತಿ ಎದುರಾಗಿದೆ.

ಈ ಕುಟುಂಬಗಳ ಯುವಕರು ಕುಲಕಸುಬಾದ ಬುಟ್ಟಿ ಹೆಣೆಯುವುದನ್ನು ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ದಿನಕ್ಕೆ 200ರೂ. ನಿಂದ 300 ರೂ. ಕೂಲಿ ಸಂಪಾದನೆ ಮಾಡಿ ತಮ್ಮ ಕುಟುಂಬ ಸಾಕುತ್ತಿದ್ದಾರೆ. ಈ ಹಿಂದೆ ಅರಣ್ಯ ಇಲಾಖೆಯಿಂದ ಉಚಿತವಾಗಿ ಬಿದಿರನ್ನು ವಿತರಿಸಲಾಗುತ್ತಿತ್ತು.

ಆದರೆ, ಎರಡು ವರ್ಷಗಳಿಂದ ಬಿದಿರು ಪೂರೈಕೆಯಾಗುತ್ತಿಲ್ಲ. ಬಿದಿರು ಸಿಗದೆ, ಬೇರೆ ಕೆಲಸವೂ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಬುಟ್ಟಿ ಹೆಣೆಯುವ ಕಾಯಕ ಅವಲಂಬಿಸಿರುವ ಕುಟುಂಬಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಬಡ್ಡಿರಹಿತ ಸಾಲ ಸೌಲಭ್ಯ ನೀಡಬೇಕು. ಪ್ರತಿ ವರ್ಷ ಕನಿಷ್ಠ 50 ಸಾವಿರ ರೂ. ಪ್ರೋತ್ಸಾಹಧನ ನೀಡಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಸರ್ಕಾರವು ಯಾವುದೇ ಸಾಲ ಸೌಲಭ್ಯ ಕೊಡುತ್ತಿಲ್ಲ. ಸಂಸಾರ ತೂಗಿಸುವುದು, ಮಕ್ಕಳ ವಿದ್ಯಾಭ್ಯಾಸ ಮಾಡಿಸುವುದು ಕಷ್ಟವಾಗಿದೆ. ಬಿದಿರು ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಬೇಕು. ನಮ್ಮ ಜೀವನ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಬಿದಿರನ್ನು ಉಚಿತವಾಗಿ ಪೂರೈಸಬೇಕು ಎಂದು ಒತ್ತಾಯಿಸಿ
ದ್ದಾರೆ.

ನಗರದ ಕಲ್ಕುಣಿಕೆಯ ಮೇದಾರ್ ಬೀದಿಯ ನಿವಾಸಿ ದೇವರಾಜು ಪತ್ರಿಕೆಯೊಂದಿಗೆ ಮತನಾಡಿ, ಕೊಡಗು ಜಿಲ್ಲೆಯಿಂದ ಬಿದಿರು ಬೊಂಬುಗಳನ್ನು ತರಿಸುತ್ತಿದ್ದೇನೆ. ಪ್ರತಿ ಕುಟುಂಬಕ್ಕೆ ಆರು ಬೊಂಬುಗಳನ್ನು 1,200ರೂ.ನಂತೆ ಮಾರಾಟ ಮಾಡುತ್ತಿದ್ದೇನೆ. ಬೊಂಬು ಸಿಗುತ್ತಿರುವುದರಿಂದ ನಿವಾಸಿಗಳಿಗೆ ಸ್ವಲ್ಪ ಅನುಕೂಲವಾಗುತ್ತಿದೆ. ಇಲ್ಲಿನವರು ತಯಾರಿಸುವ ಬಿದಿರು ವಸ್ತುಗಳನ್ನು ಜಿಲ್ಲೆಯ ಹಲವಾರು ತಾಲ್ಲೂಕಿನ ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ ಎಂದು ಹೇಳಿದ್ದಾರೆ.

50 ವರ್ಷಗಳಿಂದ ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಿದ್ದೇವೆ. ನಮಗೆ ಯಾವುದೇ ಜಮೀನಿಲ್ಲ. ಮನೆಗಳು ಶಿಥಿಲಗೊಂಡಿವೆ. ಸಂಕಷ್ಟದ ಸ್ಥಿತಿಯಲ್ಲಿದ್ದೇವೆ. ನಮ್ಮ ಜಾತಿಯಲ್ಲೇ ಯಾರೂ ವಿದ್ಯಾವಂತರಿಲ್ಲ ಹಾಗೂ ರಾಜಕೀಯವಾಗಿ ಯಾರೂ ಮುಂದೆ ಬಂದಿಲ್ಲ.

ಹಿಂದಿನ ಶಾಸಕ ಹೆಚ್.ಪಿ.ಮಂಜುನಾಥ್ ಅವರು ವೈಯಕ್ತಿಕವಾಗಿ ನಮಗೆ ಬಂಬುಗಳನ್ನು ನೀಡಿದ್ದರು. ನಂತರ ಯಾರಿಂದಲೂ ನೆರವು ಸಿಗಲಿಲ್ಲ. ಸರ್ಕಾರದ ಯಾವ ಸವಲತ್ತೂ ಸಹ ಸಿಗುತ್ತಿಲ್ಲ. ಈಗಿನ ಶಾಸಕರು ಹಾಗೂ ಸಂಸದರುನಮ್ಮ ಮೇದರ ಜನಾಂಗಕ್ಕೆ ಸರ್ಕಾರದ ಸವಲತ್ತನ್ನುಕೊಡಿಸಬೇಕು ಎಂದು ಕಲ್ಕುಣಿಕೆ ನಿವಾಸಿ ಕಂಸಯ್ಯ ಮತ್ತಿತರರು ಮನವಿ ಮಾಡಿದ್ದಾರೆ.

Facebook Comments