ಬಿಬಿಎಂಪಿ ಬಜೆಟ್‍ನಲ್ಲಿ ಮೇಯರ್ ಫಂಡ್‍ಗೆ 175 ಕೋಟಿ ರೂ ಮೀಸಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.18- ಈ ಬಾರಿ ಮೇಯರ್ ಫಂಡ್‍ಗೆ 175 ಕೋಟಿಯನ್ನು ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ. ಉಪಮೇಯರ್ ವಿವೇಚನೆಗೆ 75 ಕೋಟಿ ರೂ.ಗಳನ್ನು ನೀಡಲಾಗಿದೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು, ವೃಷಭಾವತಿನಗರ ವಾರ್ಡ್‍ನ ಸದಸ್ಯರು, ಮಾಜಿ ಉಪಮಹಾಪೌರರೂ ಆದ ಹೇಮಲತಾ ಗೋಪಾಲಯ್ಯ ಅವರು ಬಿಬಿಎಂಪಿಯ ಪೌರ ಸಭಾಂಗಣದಲ್ಲಿಂದು ಮಂಡಿಸಿದ ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿದರು.

ಮೇಯರ್-ಉಪಮೇಯರ್ ವಿವೇಚನಾ ಹಣದ ಜತೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರ (ಹೇಮಲತಾ ಗೋಪಾಲಯ್ಯ) ಫಂಡ್‍ಗೂ 75 ಕೋಟಿ ರೂ.ಗಳನ್ನು ನಿಗದಿಗೊಳಿಸಲಾಗಿದೆ.

ಉತ್ತಮ ಬಜೆಟ್ ಎಂದು ಬಣ್ಣಿಸಿದ ಮೇಯರ್ ಗಂಗಾಂಭಿಕೆ : ಬೋಗಸ್ ಬಜೆಟ್ ಎಂಬ ಪ್ರತಿಪಕ್ಷಗಳ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಮೇಯರ್ ಗಂಗಾಂಬಿಕೆ ಅವರು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಅವರು ಜನಪ್ರಿಯ ಬಜೆಟ್ ಮಂಡಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.

ಬಿಬಿಎಂಪಿ ಪ್ರಸಕ್ತ ಸಾಲಿನ ಆಯವ್ಯಯ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಹೇಮಲತಾ ಗೋಪಾಲಯ್ಯ ಅವರು ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‍ಗಳು ಮತ್ತು ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ಪ್ರತಿಪಕ್ಷಗಳ ಸದಸ್ಯರ ವಾರ್ಡ್‍ಗಳಿಗೂ ಜೆಡಿಎಸ್, ಕಾಂಗ್ರೆಸ್ ಸದಸ್ಯರ ವಾರ್ಡ್‍ಗಳಿಗೂ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಿದ್ದಾರೆ. ಈ ಬಜೆಟ್ ನಗರದ ಅಭಿವೃದ್ಧಿಗೆ ಪೂರಕವಾಗಿದೆ. ಹಲವು ಉತ್ತಮ ಯೋಜನೆಗಳನ್ನು ಘೋಷಿಸುವ ಮೂಲಕ ಭವಿಷ್ಯದ ನವಬೆಂಗಳೂರಿಗೆ ಮುನ್ನುಡಿ ಬರೆಯಲಾಗಿದೆ ಎಂದು ಮೇಯರ್ ಬಣ್ಣಿಸಿದರು.

Facebook Comments

Sri Raghav

Admin