ಮೋದಿಗೆ ಸೈನಿಕರಿಗಿಂತ ಚುನಾವಣೆಯೇ ಮುಖ್ಯವಾಗಿದೆ : ಗುಂಡೂರಾವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.18- ಪ್ರಧಾನಿ ನರೇಂದ್ರ ಮೋದಿ ಅವರು ಉಗ್ರವಾದವನ್ನು ಹತ್ತಿಕ್ಕುವ ಬದಲಾಗಿ ಲೋಕಸಭೆ ಚುನಾವಣೆಯತ್ತಲೇ ಹೆಚ್ಚು ಗಮನ ಹರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ಪಕ್ಷದ ಕಚೇರಿಯಲ್ಲಿಂದು ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆಯೇ ದೇಶದಲ್ಲಿ ಆತಂಕವಾದ ಹೆಚ್ಚಾಗಿದೆ.

ನೆಪಮಾತ್ರಕ್ಕಷ್ಟೇ ಇವರು ದೇಶ ಭಕ್ತಿಯ ಬಗ್ಗೆ ಮಾತನಾಡುತ್ತಿದ್ದು, ಅವರ ಎಲ್ಲಾ ನಡವಳಿಕೆಗಳು ಜನರನ್ನು ದಾರಿತಪ್ಪಿಸಿ ಮತಗಳಿಸುವುದರ ಮೇಲಿದೆ. ಉಗ್ರರ ದಾಳಿಯಲ್ಲೂ ಕೂಡ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗಿರುವುದು ಖಂಡನಾರ್ಹ.

ದೇಶದ ರಕ್ಷಣೆ ವಿಷಯದಲ್ಲಿ ರಾಜಕಾರಣ ಮಾಡಬಾರದು. ಆದರೆ, ಬಿಜೆಪಿ ವ್ಯವಸ್ಥಿತವಾಗಿ ರಾಜಕೀಯ ಮಾಡುತ್ತಲೇ ಬರುತ್ತಿದೆ. ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ದಾಳಿಯನ್ನೂ ಕೂಡ ರಾಜಕೀಯಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆ.

ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜಕೀಯ ಮಾಡಿ ಉಗ್ರರ ದಾಳಿಯನ್ನು ಮುಂದಿಟ್ಟುಕೊಂಡು ಮತಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲೇ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ ಲೋಕಸಭೆ ಚುನಾವಣೆ ವೇಳೆ ಉಗ್ರವಾದವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದರು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಉಗ್ರರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.

ಒಮ್ಮೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾಗಿ ಹೇಳಿ ಭಾರಿ ಪ್ರಮಾಣದಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ಬೆಳವಣಿಗೆಗಳು ಆಗಿಲ್ಲ. ಪಾಕಿಸ್ತಾನವನ್ನು ಬಿಜೆಪಿ ಅವಧಿಯಲ್ಲಿ ಮಟ್ಟ ಹಾಕುವ ಪ್ರಯತ್ನ ಆಗಲಿಲ್ಲ ಎಂದು ಕಿಡಿಕಾರಿದರು.

Facebook Comments