ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಾಜಿ ಹಿನ್ನೆಲೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಫೆ.18- ಸಿಆರ್‍ಪಿಎಫ್‍ನ 40 ಯೋಧರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಜೈಷ್-ಇ-ಮೊಹಮ್ಮದ್ ಸಂಘಟನೆಯ ಕಮಾಂಡರ್ ಹಾಗೂ ಪುಲ್ವಾಮಾ ಘಟನೆಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಜಿ ಎಂಬಾತನನ್ನು ಭಾರತೀಯ ಯೋಧರು ಇಂದು ಹತ್ಯೆಗೈಯ್ದಿದ್ದಾರೆ.

ಈ ಮೂಲಕ ಭಾರತೀಯ ವೀರ ಯೋಧರ ಶ್ರಮದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ ಬೆನ್ನಲ್ಲೇ ಸೇನಾಪಡೆ ಬಹುದೊಡ್ಡ ಯಶಸ್ಸು ಸಾಧಿಸಿದೆ.

ಕಳೆದ ಗುರುವಾರ ಪುಲ್ವಾಮಾದ ಆವಂತಿ ಪೊರ್‍ನಲ್ಲಿ ಬಾಂಬ್ ತುಂಬಿದ್ದ ವಾಹನವನ್ನು ಸ್ಫೋಟಿಸಲು ಈತ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಮತ್ತೋರ್ವ ಪ್ರಮುಖ ಸಂಚುಕೋರ ಜೈಷ್-ಇ-ಮೊಹಮ್ಮದ್ ಕಮಾಂಡರ್ ಕಮ್ರಾನ್‍ನನ್ನು ಹಿಡಿಯಲು ಸೇನಾಪಡೆ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

ಮೂಲತ ಪಾಕಿಸ್ತಾನದವನಾದ ಅಬ್ದುಲ್ ರಶೀದ್ ಘಾಜಿ ಬಾಂಬ್ ಸ್ಫೋಟಿಸುವಲ್ಲಿ ಮತ್ತು ತಯಾರಿಸುವಲ್ಲಿ ಅತ್ಯಂತ ಪರಿಣಿತ. ಜೈಷ್-ಇ-ಮೊಹಮ್ಮದ್ ಸಂಘಟನೆಯ ಸಂಸ್ಥಾಪಕ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಪಾತಕಿ ಮಸೂದ್ ಅಜಾರ್‍ನ ಅತ್ಯಂತ ನಂಬಿಕಸ್ಥ ಭಂಟ.

ಅಫ್ಘಾನಿಸ್ತಾನಕ್ಕೆ ತೆರಳಿ ಬಾಂಬ್ ಸ್ಫೋಟಿಸುವುದು, ತಯಾರಿಕೆ, ದಾಳಿ ನಡೆಸುವುದು ಸೇರಿದಂತೆ ಹಲವು ರೀತಿಯಲ್ಲಿ ತರಬೇತಿ ಪಡೆದಿದ್ದ ಈತ ಪ್ರತ್ಯೇಕ ಕಾಶ್ಮೀರಕ್ಕಾಗಿ ಹೋರಾಟ ನಡೆಸುತ್ತಿರುವವರಿಗೆ ಬೆಂಬಲ ಸೂಚಿಸಿದ್ದ.

ಕಾಶ್ಮೀರಕ್ಕಾಗಿ ಹೋರಾಡುವವರನ್ನು ಸ್ವಾತಂತ್ರ್ಯ ಹೋರಾಟಗಾರರು ಎನ್ನುತ್ತಿದ್ದ ಈತ ಎರಡು ತಿಂಗಳ ಹಿಂದಷ್ಟೇ ಅಂದರೆ ಡಿಸೆಂಬರ್‍ನಲ್ಲಿ ಕಣಿವೆ ರಾಜ್ಯಕ್ಕೆ ಒಳನುಸುಳಿದ್ದ. ತಾಲಿಬಾನ್ ಉಗ್ರರ ರೀತಿಯಲ್ಲೇ ದಾಳಿ ನಡೆಸುವ ಬಗ್ಗೆ ತರಬೇತಿ ಪಡೆದಿದ್ದ ಘಾಜಿ ಇತ್ತೀಚೆಗೆ ಕಣಿವೆ ರಾಜ್ಯದಲ್ಲಿ ಸಂಭವಿಸುತ್ತಿದ್ದ ಪ್ರಮುಖ ಘಟನೆಗಳಲ್ಲಿ ಈತನ ಕೈವಾಡವಿತ್ತು.

ಸ್ಥಳೀಯ ಯುವಕರನ್ನುಬಳಸಿಕೊಂಡು ಜಿಹಾದ್ ಕೃತ್ಯಕ್ಕೆ ಪ್ರಚೋದನೆ ನೀಡುತ್ತಿದ್ದ. ಕಾಶ್ಮೀರಕ್ಕಾಗಿ ಹೋರಾಟ ನಡೆಸಿ ವೀರ ಮರಣವನ್ನಪ್ಪಿದರೆ ಸ್ವರ್ಗದಲ್ಲಿ ಪ್ರಾಪ್ತಿ ಸಿಗುತ್ತದೆ ಎಂದು ಕಾಶ್ಮೀರಿ ಯುವಕರ ತಲೆಕೆಡಿಸುವುದೇ ಈತನ ಕಾಯಕವಾಗಿತ್ತು.

ಕಡಿಮೆ ಹಣಕ್ಕೆ ಸಿಗುತ್ತಿದ್ದ ಯುವಕರನ್ನು ಬಳಸಿಕೊಂಡು ಅವರನ್ನು ಆತ್ಮಾಹುತಿ ಬಾಂಬರ್‍ಗಳಾಗಿ ಪರಿವರ್ತಿಸುತ್ತಿದ್ದ. ಇದರ ಭಾಗವಾಗಿಯೇ ಆದಿಲ್ ದರ್ ಎಂಬ ಯುವಕನ ಮನಪರಿವರ್ತಿಸಿ ಆತ್ಮಾಹುತಿಗೆ ಸಜ್ಜುಗೊಳಿಸಿದ್ದ.

ಕಳೆದ ಗುರುವಾಗ ಸಂಭವಿಸಿದ ಭೀಕರ ಘಟನೆಗೆ ಅಬ್ದುಲ್ ರಶೀದ್ ಘಾಜಿ ಮತ್ತು ಕಮ್ರಾನ್ ಎಂಬ ಉಗ್ರರೇ ಪ್ರಮುಖ ಸೂತ್ರಧಾರರು ಎನ್ನಲಾಗಿದೆ. ಇವರ ಹತ್ಯೆಯಿಂದಾಗಿ ಜೈಷ್-ಇ-ಮೊಹಮ್ಮದ್‍ಗೆ ಬಹುದೊಡ್ಡ ಹಿನ್ನಡೆಯಾಗಿದೆ.

Facebook Comments

Sri Raghav

Admin