ಬಿಗ್ ಬ್ರೇಕಿಂಗ್ : ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಫಿನಿಷ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಫೆ.18- ಸಿಆರ್‍ಪಿಎಫ್‍ನ 40 ಯೋಧರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಜೈಷ್-ಇ-ಮೊಹಮ್ಮದ್ ಸಂಘಟನೆಯ ಕಮಾಂಡರ್ ಹಾಗೂ ಪುಲ್ವಾಮಾ ಘಟನೆಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಜಿ ಎಂಬಾತನನ್ನು ಭಾರತೀಯ ಯೋಧರು ಇಂದು ಹತ್ಯೆಗೈಯ್ದಿದ್ದಾರೆ.

ಈ ಮೂಲಕ ಭಾರತೀಯ ವೀರ ಯೋಧರ ಶ್ರಮದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ ಬೆನ್ನಲ್ಲೇ ಸೇನಾಪಡೆ ಬಹುದೊಡ್ಡ ಯಶಸ್ಸು ಸಾಧಿಸಿದೆ.

ಕಳೆದ ಗುರುವಾರ ಪುಲ್ವಾಮಾದ ಆವಂತಿಪೊರ್‍ನಲ್ಲಿ ಬಾಂಬ್ ತುಂಬಿದ್ದ ವಾಹನವನ್ನು ಸ್ಫೋಟಿಸಲು ಈತ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
ಮತ್ತೋರ್ವ ಪ್ರಮುಖ ಸಂಚುಕೋರ ಜೈಷ್-ಇ-ಮೊಹಮ್ಮದ್ ಕಮಾಂಡರ್ ಕಮ್ರಾನ್‍ನನ್ನು ಹಿಡಿಯಲು ಸೇನಾಪಡೆ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

ಈ ಇಬ್ಬರು ಕಳೆದ ಗುರುವಾರ ಪುಲ್ವಾಮಾದ ರಾಷ್ಟ್ರೀಯ ಹೆದ್ದಾರಿ ಆವಂತಿಪೊರ್‍ನಲ್ಲಿ ಸಂಭವಿಸಿದ ಘಟನೆಯ ಮಾಸ್ಟರ್ ಮೈಂಡ್‍ಗಳಾಗಿದ್ದಾರೆ.
ಈಗಾಗಲೇ ಅಬ್ದುಲ್ ರಸೀದ್ ಘಾಜಿ ಸೇನಾಪಡೆಗಳ ಗುಂಡಿಗೆ ಹತ್ಯೆಯಾಗಿರುವುದನ್ನು ಸೇನಾಪಡೆ ಖಚಿತಪಡಿಸಿದೆ. ಆದರೆ ತಲೆಮರೆಸಿಕೊಂಡಿರುವ ಕಮ್ರಾನ್‍ನನ್ನು ಜೀವಂತವಾಗಿ ಸೆರೆ ಹಿಡಿಯಲು ಪ್ರಯತ್ನ ಮುಂದುವರೆದಿದೆ.

ಕಳೆದ ರಾತ್ರಿ ಅಬ್ದುಲ್ ರಶೀದ್ ಘಾಜಿ ಮತ್ತು ಕಮ್ರಾನ್ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಪಿಂಗ್ಲಾನ್ ಪ್ರದೇಶದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದರು.
ಈ ಬಗ್ಗೆ ಗುಪ್ತಚರ ವಿಭಾಗದ ಅಧಿಕಾರಿಗಳು ನೀಡಿದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ರಾಷ್ಟ್ರೀಯ ರೈಫಲ್ಸ್ 55 ಯೋಧರು ಶರಣಾಗುವಂತೆ ಉಗ್ರರಿಗೆ ಸೂಚಿಸಿದರು.

ಆದರೆ ಉಗ್ರರು ಸೇನಾ ಯೋಧರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ಮೇಜರ್ ಸೇರಿದಂತೆ ಮೂವರು ಸೇನಿಕರು ಹಾಗೂ ಓರ್ವ ಸ್ಥಳೀಯ ನಾಗರಿಕ ಮೃತಪಟ್ಟರು.  ಪರಿಸ್ಥಿತಿ ಕೈ ಮೀರುತ್ತಿದ್ದನ್ನು ಅರಿತ ಸೇನಾಪಡೆ ಪ್ರತಿ ದಾಳಿ ನಡೆಸಿದ್ದರಿಂದ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಾಜಿ ಹತನಾಗಿದ್ದಾನೆ.

ಇನ್ನು ಕ್ರಮಾನ್‍ನನ್ನು ಹಿಡಿಯಲು ಯೋಧರು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ.  ಗುರುವಾರದ ಘಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾರ್ವಜನಿಕ ಸಮಾರಂಭಗಳಲ್ಲಿ ಯೋಧರನ್ನು ಹತ್ಯೆಗೈದ ಉಗ್ರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಶಪಥ ಮಾಡಿದ್ದರು.

ನಮ್ಮ ಸೈನಿಕರು ಯಾವಾಗ? ಎಲ್ಲಿ? ಹೇಗೆ? ದಾಳಿ ಮಾಡಬೇಕು ಎಂಬುದನ್ನು ಅವರೇ ನಿರ್ಧರಿಸಲಿ. ಅವರಿಗೆ ಸಂಪೂರ್ಣವಾಗಿ ಸ್ವತಂತ್ರ ನೀಡಿದ್ದೇವೆ ಎಂದು ಹೇಳಿದ್ದರು.

Facebook Comments

Sri Raghav

Admin