ರಾಜ್ಯಾದ್ಯಂತ ‘ಜಲಾಮೃತ’ ಯೋಜನೆ ಪ್ರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.18- ರಾಜ್ಯಾದ್ಯಂತ ನೀರಿನ ಚಳುವಳಿಯನ್ನು ರೂಪಿಸುವ ಉದ್ದೇಶದಿಂದ ಜಲಾಮೃತ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಲಾಮೃತ ಯೋಜನೆಯು ಪ್ರಾದೇಶಿಕ ಅಂಕಿ ಅಂಶ, ಉಪಗ್ರಹ ಆಧಾರಿತ ಚಿತ್ರಣ, ಸ್ಥಳಾಕೃತಿ, ಭೌಗೋಳಿಕ ಅಧ್ಯಯನದ ಆಧಾರದ ಮೇಲೆ ನೀರಿನ ಆಯವ್ಯಯ, ನೀರಿನ ಕೊಯ್ಲು , ನೀರಿನ ಸಂರಕ್ಷಣೆಯನ್ನು ವೈಜ್ಞಾನಿಕ ವಿಧಾನಗಳ ಮೂಲಕ ಅನುಷ್ಠಾನಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.

ಈ ಯೋಜನೆ ಸಮುದಾಯಗಳ ಆಧಾರಿತ ಚಳುವಳಿಯಾಗಿದ್ದು, ಸರ್ಕಾರದ ಪ್ರಮುಖ ಇಲಾಖೆಗಳಾದ ಪಂಚಾಯತ್ ರಾಜ್ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಜಲ ಕಾರ್ಯಕರ್ತರು, ಖಾಸಗಿ ಸಂಸ್ಥೆಗಳು ಹಾಗೂ ಸ್ಥಳೀಯ ಸಮುದಾಯಗಳ ಸಹಭಾಗಿತ್ವದೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಹೇಳಿದರು.

ನೀರಿನ ಸಂಪನ್ಮೂಲಗಳಾದ ಜಲಾಶಯಗಳು, ನದಿಗಳು, ಕೆರೆಗಳು, ನೀರಿನ ಕಾಲುವೆಗಳು ನಮ್ಮ ನಿಷ್ಕ್ರಿಯತೆಯಿಂದಾಗಿ ಶಿಥಿಲವಾಗಲು ಅವಕಾಶ ಮಾಡಿಕೊಟ್ಟಂತಾಗಿದೆ.

ಜಲ ಸಾಕ್ಷರತೆ ಜಿಲ್ಲಾ ಪಂಚಾಯ್ತಿ ತಾಲ್ಲೂ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ಹೆಚ್ಚಿಸುವ ಮೂಲಕ ಅನೇಕ ಕ್ರಮಗಳನ್ನು ರೂಪಿಸುವ ಅಭಿಯಾನವಾಗಿದೆ. ನೀರಿನ ಮೂಲಗಳಾದ ಕೆರೆಕುಂಟೆ ಮೊದಲಾದವುಗಳ ಪ್ರದೇಶ, ಸಾಮಥ್ರ್ಯ, ಅವುಗಳ ಸ್ಥಿತಿಗತಿ, ಒತ್ತುವರಿಗಳನ್ನು ದಾಖಲೆ ಮಾಡಲಾಗುತ್ತದೆ ಎಂದರು.

ಕೆರೆಗಳ ಪುನರುಜ್ಜೀವನಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಜಲಸಂಗ್ರಹಣೆಯ ವೈಜ್ಞಾನಿಕ ಸ್ವರೂಪಗಳಾದ ಚೆಕ್‍ಡಾಂ, ಅಣ್ಣೆಕಟ್ಟುಗಳು, ಕಿರು ಜಲಾಶಯಗಳಿಗೆ ಒತ್ತು ನೀಡಲಾಗುವುದು. ಮುಂದಿನ 2 ವರ್ಷಗಳಲ್ಲಿ 12 ಸಾವಿರ ಚೆಕ್‍ಡಾಂಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ಯೋಜನಾ ಕ್ರಮಗಳನ್ನು ಅನುಷ್ಠಾನಗೊಳಿಸಿ ಗಿಡ ನೆಡುವುದು, ಜಲಮೂಲಗಳ ಪುನರುಜ್ಜೀವನ, ನೂತನ ಜಲ ಮೂಲಗಳ ಸೃಜನೆ ಜೊತೆಗಿನ ಸಂಘಟಿತ ಚಟುವಟಿಕೆಯಿಂದ ಹಸರೀಕರಣ ಮಾಡಲಾಗುವುದು ಎಂದರು.

ಪ್ರಸಕ್ತ ವರ್ಷವನ್ನು ಜಲ ವರ್ಷವೆಂದು ಘೋಷಿಸಿ ಆಚರಿಸಲು ನಿರ್ಧರಿಸಲಾಗಿದ್ದು, ರಾಜ್ಯಾದ್ಯಂತ ಇದು ಅನ್ವಯವಾಗಲಿದೆ. ಶಾಲಾ ಕಾಲೇಜು, ಸರ್ಕಾರೇತರ ಸಂಸ್ಥೆಗಳು ಸರ್ಕಾರದೊಂದಿಗೆ ಈ ಜಲ ವರ್ಷ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.

ಸರ್ಕಾರೇತರ ಸಂಸ್ಥೆಗಳು, ಕಾಪೆರ್ರೇಪ್ರೋಟ್ ವಲಯವೂ ಕೂಡ ರಾಜ್ಯಾದ್ಯಂತ ಜಲಸಂರಕ್ಷಣೆ ಮತ್ತು ಹಸರೀಕರಣ ಚಳುವಳಿಯಲ್ಲಿ ಕ್ರಿಯಾಶೀಲವಾಗುವ ಮೂಲಕ ಜಲಾಮೃತ ಅಭಿಯಾನವನ್ನು ಪ್ರಾರಂಭಿಸುವುದಗಿ ಕೃಷ್ಣಭೈರೇಗೌಡ ತಿಳಿಸಿದರು. ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತಿಕ್ ಉಪಸ್ಥಿತರಿದ್ದರು.

Facebook Comments