ವೃದ್ಧಾಪ್ಯ ಕಾಯಿಲೆಯಲ್ಲ : ಡಾ ಮಹೇಶ್ ಶರ್ಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.19- ಆಯುಷ್ ಆರೋಗ್ಯ ಫೌಂಡೇಷನ್ ಮತ್ತು ಸುಜನ ಸಮಾಜ ಸಂಸ್ಥೆಯ ಸಹಯೋಗದೊಂದಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ‘ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಗಳು ಕುರಿತ ವಿಶೇಷ ಆರೋಗ್ಯ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೈದ್ಯಲೋಕ ಮತ್ತು ಹೆಲ್ತ್ ವಿಷನ್ ಆರೋಗ್ಯ ಮಾಸಪತ್ರಿಕೆ ಆಯೋಜಿಸುವ ತಿಂಗಳ ಆರೋಗ್ಯ ಜಾಗೃತಿ ಅಭಿಯಾನ ¾ಆರೋಗ್ಯ ನಂದನ¿ದ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು. ಸುಜನ ಸಮಾಜ ಸಂಸ್ಥೆ ಅಧ್ಯಕ್ಷ ರಾ.ಕೃ.ಶ್ರೀಧರ ಮೂರ್ತಿ ಸಮಾರಂಭ ಉದ್ಘಾಟಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ತಜ್ಞ ವೈದ್ಯ ಡಾ. ಮಹೇಶ್ ಶರ್ಮಾ, ವೃದ್ಧಾಪ್ಯ ಎಂಬುದು ಕಾಯಿಲೆಯಲ್ಲ, ಜೀವನ ಶೈಲಿಯನ್ನು ಬದಲಾಯಿಸಿಕೊಂಡು ವ್ಯಾಯಾಮಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದರು. ತಮ್ಮ ಆರೋಗ್ಯಕರ ಹವ್ಯಾಸಗಳನ್ನು ಮುಂದುವರಿಸುವುದರ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದರಿಂದ ವೃದ್ಧಾಪ್ಯದಲ್ಲೂ ಸಂತಸದ ಜೀವನ ನಡೆಸಬಹುದು ಎಂದು ಡಾ. ಮಹೇಶ್ ಶರ್ಮ ಅಭಿಪ್ರಾಯಪಟ್ಟರು.

ರಾಜಾಜಿನಗರದ ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯ ಡಾ. ಶಿವಕುಮಾರ್ ಮಾತನಾಡಿ ನಮ್ಮ ಪರಂಪರಾಗತ ಜೀವನ ಶೈಲಿ ಹಾಗೂ ಸ್ಥಳೀಯ ಆಹಾರ ಪದ್ಧತಿಯ ಬದಲಾವಣೆಯೇ ಹಲವು ಆರೋಗ್ಯಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಿದರು. ಮನೆ ಅಡುಗೆಯೇ ಆರೋಗ್ಯಕರ ಆಹಾರವಾಗಿದ್ದು, ಇದನ್ನೇಹೆಚ್ಚು ಸೇವಿಸಬೇಕು ಎಂದು ಅವರು ಹೇಳಿದರು.

ಆಯುಷ್ ಆರೋಗ್ಯ ಫೌಂಡೇಷನ್‍ನ ಸಂಚಾಲಕ ಡಾ. ಶ್ರೀಕೃಷ್ಣ ಮಾಯ್ಲೆಂಗಿ, ಆರೋಗ್ಯ ನಂದನ ಕಾರ್ಯಕ್ರಮದ ಸಂಚಾಲಕ ಎನ್.ವಿ. ರಮೇಶ್, ಹಿರಿಯ ಪತ್ರಕರ್ತ ಹನುಮೇಶ್ ಯಾವಗಲ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ನಂತರ ಆರೋಗ್ಯ ವಿಷಯಗಳ ಸಂದೇಹಗಳಿಗೆ ತಜ್ಞರು ಉತ್ತರಿಸಿದರು. ಆರೋಗ್ಯ ಪುಸ್ತಕಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

Facebook Comments