ಬೆಂಗಳೂರಲ್ಲಿ 2 ಸೂರ್ಯಕಿರಣ್ ವಿಮಾನಗಳು ಪತನ, ಓರ್ವ ಪೈಲಟ್‍ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.19- ನಾಳೆಯಿಂದ ಯಲಹಂಕದ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ(ಏರ್ ಶೋ) ಆರಂಭವಾಗುವ ಮುನ್ನವೇ ಇಂದು ಎರಡು ಲಘು ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಓರ್ವ ಪೈಲಟ್ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಾಹ್ನ 12ರ ಸಮಯದಲ್ಲಿ ನಡೆದಿದೆ.

ಘಟನೆಯಲ್ಲಿ ಓರ್ವ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಉಳಿದ ಇಬ್ಬರು ಪೈಲಟ್‍ಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಓರ್ವ ನಾಗರೀಕನಿಗೂ ಗಾಯವಾಗಿದೆ ಎಂದು ತಿಳಿದು ಬಂದಿದೆ. ಯಲಹಂಕ ಸಮೀಪವಿರುವ ಘಂಟಿಗಾನಹಳ್ಳಿಯ ಬಳಿ ಭಾರತೀಯ ವಾಯು ಪಡೆಗೆ ಸೇರಿದ ಎರಡು ಸೂರ್ಯ ಕಿರಣ್ ಯುದ್ಧ ವಿಮಾನಗಳು ನಾಳಿನ ವೈಮಾನಿಕ ಪ್ರದರ್ಶನಕ್ಕೆ ತಾಲೀಮು ನಡೆಸುತ್ತಿದ್ದವು. ಇದ್ದಕ್ಕಿದ್ದಂತೆ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ನೆಲಕ್ಕೆ ಉರುಳಿ ಬಿದ್ದಿದೆ.

ಹೆಚ್‍ಎಎಲ್ ನಿರ್ಮಿತ ಸೂರ್ಯ ಕಿರಣ್ ಲಘು ಯುದ್ಧ ವಿಮಾನಗಳು ಇದುವರೆಗೂ ಅಪಘಾತಕ್ಕೆ ಒಳಗಾದ ನಿದರ್ಶನಗಳಿಲ್ಲ.  ನಾಳೆಯಿಂದ ಆರಂಭವಾಗಲಿರುವ ವೈಮಾನಿಕ ಪ್ರದರ್ಶನಕ್ಕೆ ಈ ಎರಡು ಯುದ್ಧ ವಿಮಾನಗಳು ಇಂದು ಬೆಳಗ್ಗಿನಿಂದಲೇ ತಾಲೀಮು ನಡೆಸುತ್ತಿದ್ದವು.

ಎರಡೂ ಯುದ್ಧ ವಿಮಾನಗಳು ಮುಖಾಮುಖಿಯಾದುದರಿಂದ ಘಂಟಿಗಾನಹಳ್ಳಿ ಬಳಿಯ ಮನೆಯ ಮೇಲೆ ಬಿದ್ದಿದೆ. ಪರಿಣಾಮ ಕ್ಷಣಾರ್ಧದಲ್ಲೇ ನೋಡ ನೋಡುತ್ತಿದ್ದಂತೆ ಮನೆ ಹಾಗೂ ಅದರ ಪಕ್ಕದಲ್ಲಿದ್ದ ಧಗಧಗನೇ ಹೊತ್ತಿ ಉರಿದಿದೆ.

ಯುದ್ಧ ವಿಮಾನಗಳ ತಾಲೀಮನ್ನು ವೀಕ್ಷಿಸಲು ನೆರೆದಿದ್ದ ಜನಕ್ಕೆ ಮೊದಲು ಅಪಘಾತ ಸಂಭವಿಸಿದೆ ಎಂಬುದನ್ನು ನಂಬಲು ಸಾಧ್ಯವಾಗಲಿಲ್ಲ. ಯಾವಾಗ ಬೆಂಕಿ ಕಾಣಿಸಿಕೊಂಡಿತೋ ಆಗ ಸ್ಥಳೀಯರು ದಿಗ್ಬ್ರಾಂತಿಗೊಳಗಾಗಿ ವಿಮಾನ ಪತನಗೊಂಡಿರುವ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದರು.

 

ಪೈಲಟ್‍ಗಳು ವಿಮಾನ ಧರೆಗುರುಳುತ್ತಿದ್ದಂತೆ ತುರ್ತು ನಿರ್ಗಮನದ ಮೂಲಕ ಪ್ಯಾರಾಚ್ಯೂಟ್ ಸಹಾಯದಿಂದ ಹೊರ ಜಿಗಿದಿದ್ದಾರೆ. ಈ ವೇಳೆ ಓರ್ವ ಪೈಲಟ್ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಸ್ಪರೂಪದ ಗಾಯಗಳಾಗಿದ್ದು, ಸಾವು , ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಒಂದು ವೇಳೆ ಎರಡೂ ವಿಮಾನಗಳು ಜನವಸತಿ ಪ್ರದೇಶದಲ್ಲಿ ಬಿದ್ದಿದ್ದರೆ ಭಾರೀ ಪ್ರಮಾಣದ ಪ್ರಾಣ ಹಾನಿ ಸಂಭವಿಸುತ್ತಿತ್ತು. ಆದರೆ ಜನವಸತಿ ಇಲ್ಲದ ಪ್ರದೇಶದಲ್ಲಿ ವಿಮಾನಗಳು ಬಿದ್ದಿರುವುದು ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಇನ್ನು, ಮನೆಯೊಂದರ ಮೇಲೆ ವಿಮಾನಗಳು ಬಿದ್ದಿದ್ದು, ಸದರಿ ಮನೆಯಲ್ಲಿ ಯಾರ್ಯಾರಿದ್ದರು ಎಂಬುದು ಈವರೆಗೆ ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ವಿಮಾನದಲ್ಲಿ ಇಬ್ಬರೇ ಪೈಲಟ್‍ಗಳು ತಾಲೀಮು ನಡೆಸುತ್ತಿದ್ದರು ಎನ್ನಲಾಗಿದೆ.

 

Plane

# ಬೆಚ್ಚಿ ಬಿದ್ದ ಜನ:
ಇನ್ನು ಬೆಳಗ್ಗೆ ಯುದ್ಧ ವಿಮಾನಗಳ ತಾಲೀಮು ನೋಡಲು ನೆರೆದಿದ್ದ ಸಾರ್ವಜನಿಕರು ಈ ಘಟನೆಯಿಂದಾಗಿ ಬೆಚ್ಚಿ ಬಿದ್ದಿದ್ದಾರೆ.   ಘಂಟಿಗಾನಹಳ್ಳಿಗೂ, ವೈಮಾನಿಕ ಪ್ರದರ್ಶನ ನಡೆಯುವ ವಾಯುನೆಲೆಗೂ ಕೊಂಚ ದೂರವಷ್ಟೇ ಅಂತರವಿದೆ.

ಸೂರ್ಯ ಕಿರಣ್ ವಿಮಾನಗಳು ತಾಲೀಮು ನಡೆಸುತ್ತಿದ್ದಾಗ ಸಾಹಸ ಪ್ರದರ್ಶನ ನೋಡಲು ಸುತ್ತಮುತ್ತಲ ಭಾಗದ ಸಾವಿರಾರು ಜನರು ಕಣ್ಣರಳಿಸಿ, ತದೇಕ ಚಿತ್ತದಿಂದ ಲೋಹದ ಹಕ್ಕಿಗಳ ವಿಸ್ಮಯವನ್ನು ಕಣ್ಣಾರೆ ಕಂಡು ಮೊಬೈಲ್‍ಗಳಲ್ಲಿ ಸೆರೆಹಿಡಿಯುತ್ತಿದ್ದರು. ಇದ್ದಕ್ಕಿದ್ದಂತೆ ವಿಮಾನಗಳು ಡಿಕ್ಕಿ ಹೊಡೆದ ಶಬ್ಧ ಕೇಳಿ ಏನಾಯಿತು ಎಂದು ಊಹಿಸುವಷ್ಟರಲ್ಲೇ ಲೋಹದ ಹಕ್ಕಿಗಳು ನೆರಕ್ಕುರುಳಿದ್ದವು.

ನಾವು ತಾಲೀಮು ನೋಡುತ್ತಿದ್ದೆವು. ಸುಮಾರು 10 ನಿಮಿಷಗಳ ಕಾಲ ಯುದ್ಧ ವಿಮಾನಗಳು ಸರ್ಕಸ್ ಮಾಡುತ್ತಿದ್ದವು. ಇದ್ದಕ್ಕಿದ್ದಂತೆ ಎರಡು ವಿಮಾನಗಳು ಮುಖಾಮುಖಿ ಡಿಕ್ಕಿಯಾಗಿ ಜೋರಾದ ಶಬ್ಧ ಕೇಳಿತು. ಮೊದಲು ಇದನ್ನು ನಾವು ಸಾಹಸ ಪ್ರದರ್ಶನ ಎಂದುಕೊಂಡಿದ್ದೆವು. ಆದರೆ ಬೆಂಕಿ ಯಾವಾಗ ಕಾಣಿಸಿಕೊಂಡಿತೋ ಆಗ ಅಪಘಾತವಾಗಿದೆ ಎಂಬುದು ದೃಢವಾಯಿತು. ಅಲ್ಲದೇ ನೆಲಕ್ಕುರುಳಿದಾಗ ಜೋರಾದ ಶಬ್ಧ ಕೇಳಿ ಎದೆ ನಡುಗಿತು.

ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಪೈಲಟ್‍ಗಳನ್ನು ರಕ್ಷಿಸಿದೆವು ಎಂದು ಸ್ಥಳೀಯರಾಗಿರುವ ಉನ್ನಿಕೃಷ್ಣನ್ ತಿಳಿಸಿದರು. ಎರಡು ವಿಮಾನಗಳು ನೆಲಕ್ಕಪ್ಪಳಿಸುತ್ತಿದ್ದಂತೆ ಅವುಗಳ ವಿವಿಧ ಭಾಗಗಳು ಚೆಲ್ಲಾಪಿಲ್ಲಿಯಾದವು. ಭುಗ್ಗನೆ ಬೆಂಕಿ ಹೊತ್ತುಕೊಂಡ ಪರಿಣಾಮ ಅಗ್ನಿಶಾಮಕ ದಳದ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ನಿರತವಾಗಿದೆ.

Facebook Comments