ಪುಲ್ವಾಮಾ ದಾಳಿ ಹಿಂದೆ ‘ಪಾಪಿ’ಸ್ತಾನದ ಐಎಸ್‍ಐ ಕೈವಾಡ..!

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಫೆ.19- ಪುಲ್ವಾಮಾದಲ್ಲಿ 40ಕ್ಕೂ ಹೆಚ್ಚು ಯೋಧರನ್ನು ಬಲಿ ತೆಗೆದುಕೊಂಡ ಜೈಷ್ ಉಗ್ರಗಾಮಿ ಸಂಘಟನೆಯ ಕಾರ್‍ಬಾಂಬ್ ದಾಳಿ ಹಿಂದೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್ ಸ್ಟೇಟ್ ಇಂಟಲಿಜನ್ಸ್ (ಐಎಸ್‍ಐ)ಕೈವಾಡಯಿದೆ ಎಂದು ಭಾರತೀಯ ಸೇನೆಯ ಉನ್ನತಾಧಿಕಾರಿ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ಧಿಲ್ಲೋನ್ ತಿಳಿಸಿದ್ದಾರೆ.

ಈ ಕೃತ್ಯ ನಡೆಸಿದ ಎಲ್ಲ ಭಯೋತ್ಪಾದಕರನ್ನು 100ಗಂಟೆಯೊಳಗೆ ಮಟ್ಟ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.  ಶ್ರೀನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಿಂದಲೇ ಈ ದಾಳಿಗೆ ಜೈಷ್ ಉಗ್ರರಿಗೆ ಕುಮ್ಮಕ್ಕು ನೀಡಲಾಗಿದೆ. ಈ ದಾಳಿಯ ಹಿಂದೆ ಇಸ್ಲಾಮಾಬಾದ್ ಕೈವಾಡವಿರುವುದು ಸ್ಪಷ್ಟವಾಗಿದೆ ಎಂದರು.

ಪುಲ್ವಾಮಾ ದಾಳಿಗೆ ಕಾರಣರಾದ ಜೈಷ್ ಉಗ್ರಗಾಮಿ ಬಣದ ಎಲ್ಲ ಟಾಪ್ ಕಮಾಂಡರ್‍ಗಳನ್ನು ಕೊಲ್ಲಲಾಗಿದೆ ಎಂದು ಅವರು ತಿಳಿಸಿದರು.  ಪಾಕ್ ಬೆಂಬಲಿತ ಉಗ್ರರನ್ನು ನಿರ್ದಯವಾಗಿ ಮಟ್ಟ ಹಾಕುವುದಾಗಿ ಎಚ್ಚರಿಕೆ ನೀಡಿದ ಅವರು, ಸ್ಥಳೀಯರು ಭಯೋತ್ಪಾದನೆ ಕೃತ್ಯಗಳಿಗೆ ಮತ್ತು ಉಗ್ರರಿಗೆ ಪ್ರಚೋದನೆ ನೀಡಬಾರದು ಅಲ್ಲದೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಯೋಧರಿಗೆ ಪ್ರತಿಭಟನೆ ಮೂಲಕ ಅಡ್ಡಿಪಡಿಸಬಾರದು.

ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಯುವಾಗ ಆ ಪ್ರದೇಶದಿಂದ ದೂರವಿರಬೇಕು ಎಂದು ಸಲಹೆ ಮಾಡಿದರು. ಭಯೋತ್ಪಾದನೆ ಹಾದಿ ತುಳಿದಿರುವ ಉಗ್ರಗಾಮಿಗಳು ಶರಣಾಗುವಂತೆ ಅವರಿಗೆ ಅವರ ತಾಯಂದಿರು ಮನವೊಲಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಯಾರು ಅಮಾಯಕರು ಮತ್ತು ಯೋಧರ ವಿರುದ್ಧ ಬಂದೂಕುಗಳನ್ನು ಎತ್ತುತ್ತಾರೋ ಅವರನ್ನು ನಿರ್ಮೂಲ ಮಾಡುವುದಾಗಿ ಧಿಲ್ಲೋನ್ ಗಂಭೀರ ಎಚ್ಚರಿಕೆ ನೀಡಿದರು.

ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ನಮ್ಮ ನೀತಿ ಸ್ಪಷ್ಟವಾಗಿದೆ. ಹೊಸ ಕಾರ್ಯತಂತ್ರಜ್ಞರಿಗೆ ಉಗ್ರರ ದಮನ ಕಾರ್ಯಾಚರಣೆ ಮುಂದುವರಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Facebook Comments

Sri Raghav

Admin