‘ನಾವು ಬೆಗ್ಗರ್ಸ್ ಅಲ್ಲ’ : ದೋಸ್ತಿಗಳಿಗೆ ಶಾಕ್ ಕೊಟ್ಟ ಸಿಎಂ ಕುಮಾರಸ್ವಾಮಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಫೆ.19-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಸಂದೇಶ ನೀಡಬೇಕೆಂಬುದು ತಮ್ಮ ಉದ್ದೇಶವಾಗಿದೆ. ಆದರೆ ನಾವು ಸೀಟಿಗಾಗಿ ಭಿಕ್ಷೆ ಬೇಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಪ್ರತಿಕ್ರಿಯಿಸಿದರು.

ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್‍ಗೆ 7 ಸ್ಥಾನಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 5,3,7 ಕ್ಷೇತ್ರಗಳು ಎಂಬುದು ಪ್ರಶ್ನೆಯಲ್ಲ. ವಿ ಆರ್ ನಾಟ್ ಎ ಬೆಗ್ಗರ್ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‍ಗೆ ತಿರುಗೇಟು ನೀಡಿದರು.

ಲೋಕಸಭೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಸಂದೇಶ ನೀಡಲು ಉಭಯ ಪಕ್ಷಗಳ ನಾಯಕರು ಕೂತು ಸಮಗ್ರವಾಗಿ ಚರ್ಚೆ ಮಾಡಬೇಕಿದೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಹಾಗೂ ಕಾಂಗ್ರೆಸ್ ನಾಯಕರು ಚುನಾವಣಾ ಪೂರ್ವ ಮೈತ್ರಿ ಬಗ್ಗೆ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ನಾಯಕರು ಸೀಟು ಹೊಂದಾಣಿಕೆ ಬಗ್ಗೆ ತಮ್ಮೊಂದಿಗೆ ಸಮಾಲೋಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ತಾವು ಮೈತ್ರಿ ಸರ್ಕಾರದಲ್ಲಿ ಉತ್ತಮ ಆಡಳಿತ ನೀಡುವ ಕಡೆ ಗಮನ ಹರಿಸುವುದಾಗಿ ತಿಳಿಸಿದರು. ಅವರವರ ಪಕ್ಷವನ್ನು ಸಂಘಟಿಸುವ ಮತ್ತು ಬೆಳೆಸುವ ಜವಾಬ್ದಾರಿ ಆಯಾ ಪಕ್ಷದ ಮುಖಂಡರು, ನಾಯಕರಿಗಿದೆ. ಅದರಂತೆ ಅವರು ತಮ್ಮ ತಮ್ಮ ಪಕ್ಷಗಳ ಬೆಳವಣಿಗೆಯ ಜವಾಬ್ದಾರಿ ನಿರ್ವಹಿಸುತ್ತಾರೆ ಎಂದು ಹೇಳಿದರು.

ಸಭೆ: ಮೈಸೂರಿನ ಹಳೆಯ ಹಾಗೂ ಪಾರಂಪರಿಕ ಕಟ್ಟಡಗಳ ರಕ್ಷಣೆ, ಸಾರ್ವಜನಿಕರ ಸುರಕ್ಷತೆ ಮುಖ್ಯವಾಗಿದ್ದು, ಈ ಸಂಬಂಧ ಸದ್ಯದಲ್ಲೇ ಸಾರ್ವಜನಿಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ದೇವರಾಜ ಮಾರುಕಟ್ಟೆ ಕುಸಿತವಾಗಿರುವುದರಿಂದ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗಿದೆ. ಯಾವುದೇ ದುಡುಕಿನ ನಿರ್ಧಾರ ಮಾಡುವುದಿಲ್ಲ. ಪಾರಂಪರಿಕ ಕಟ್ಟಡವೂ ಉಳಿಯಬೇಕು, ನಿತ್ಯ ಜೀವನಕ್ಕೆ ಅದನ್ನು ಅವಲಂಬಿಸಿರುವವರಿಗೆ ತೊಂದರೆಯೂ ಆಗಬಾರದು. ಈ ನಿಟ್ಟಿನಲ್ಲಿ ನಾಗರಿಕರ, ಅಭಿಪ್ರಾಯ, ತಜ್ಞರ ವರದಿ ಪಡೆದು ಯಾವುದಕ್ಕೂ ಧಕ್ಕೆಯಾಗದಂತೆ ತೀರ್ಮಾನ ಕೈಗೊಳ್ಳಲಾಗುವುದು.

ಪಾರಂಪರಿಕ ಕಟ್ಟಡಗಳ ಬಗ್ಗೆ ಮೈಸೂರಿನ ನಾಗರಿಕರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಹೀಗಾಗಿ ಪಾರಂಪರಿಕ ವಿಶೇಷತೆಯನ್ನು ಉಳಿಸಬೇಕಿದೆ. ಹಾಗೆಯೇ ಜನಸಾಮಾನ್ಯರ ಜೀವನಕ್ಕೂ ಅಪಾಯವಾಗಬಾರದು. ಈ ನಿಟ್ಟಿನಲ್ಲಿ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

Facebook Comments

Sri Raghav

Admin