ಇಂದಿರಾ ಕ್ಯಾಂಟಿನ್ ಮಾರ್ಷಲ್‍ಗಳ ನೇಮಕದಲ್ಲೂ ಭಾರೀ ಅವ್ಯವಹಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.19- ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟಿನ್ ಹಗರಣಗಳ ಕೂಪವಾಗಿದೆ ಎಂಬ ಆರೋಪ ಕೇಳಿಬಂದಿರುವ ಬೆನ್ನಲ್ಲೆ ಈ ಕ್ಯಾಂಟಿನ್‍ಗಳಿಗೆ ಮಾಡಿರುವ ಮಾರ್ಷಲ್‍ಗಳ ನೇಮಕದಲ್ಲೂ ಭಾರೀ ಅವ್ಯವಹಾರವಾಗಿದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಈ ಸಂಬಂಧ ಲೋಕಾಯುಕ್ತ ಎಸಿಬಿ, ಬಿಎಂಟಿಎಫ್‍ನಲ್ಲಿ ದೂರು ದಾಖಲಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್, ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತರಾಗಿದ್ದ ಮನೋಜ್ ರಾಜನ್ ಮತ್ತು ಕೆಇಡಬ್ಲ್ಯೂಎಸ್ ಸಂಸ್ಥೆ ಮುಖ್ಯಸ್ಥ ಜಿ.ಬಸವರಾಜ್ ಸೇರಿದಂತೆ ಪಾಲಿಕೆ ಅಧಿಕಾರಿಗಳ ವಿರುದ್ಧವೂ ಈ ಸಂಬಂಧ ದೂರು ದಾಖಲಿಸಿರುವುದಲ್ಲದೆ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಇಂದಿರಾ ಕ್ಯಾಂಟಿನ್‍ಗಳಿಗೆ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಭದ್ರತೆ ಒದಗಿಸುವ ಮಾರ್ಷಲ್‍ಗಳ ನೇಮಕದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ. ಇಂದಿರಾ ಕ್ಯಾಂಟಿನ್‍ಗಳು ಲೂಟಿಕೋರರಿಗೆ ಕುಬೇರನ ಖಜಾನೆಯಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

174 ಇಂದಿರಾ ಕ್ಯಾಂಟಿನ್‍ಗಳು, 15 ಮೊಬೈಲ್ ಕ್ಯಾಂಟಿನ್‍ಗಳು ಮತ್ತು 19 ಅಡುಗೆ ಮನೆಗಳ ಭದ್ರತಾ ವ್ಯವಸ್ಥೆಗೆ ಒಟ್ಟು 468 ಮಂದಿ ಮಾರ್ಷಲ್‍ಗಳನ್ನು ನಿಯೋಜಿಸಲಾಗಿದೆ ಎಂಬ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಇಂದು ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಗಂಭೀರ ಆರೋಪ ಮಾಡಿ ದಾಖಲೆಗಳನ್ನು ಬಿಡುಗಡೆ ಮಾಡಿದರು.

200ಕ್ಕೂ ಕಡಿಮೆ ಮಾರ್ಷಲ್‍ಗಳನ್ನು ನೇಮಿಸಿರುವ ಕೆಇಡಬ್ಲ್ಯೂಎಸ್ ಸಂಸ್ಥೆ 468 ಮಂದಿ ಲೆಕ್ಕ ತೋರಿಸಿ ವಂಚನೆ ಮಾಡಿದೆ. ಎಲ್ಲ ಇಂದಿರಾ ಕ್ಯಾಂಟಿನ್‍ಗಳು, ಅಡುಗೆ ಮನೆಗಳು, ಮೊಬೈಲ್ ಕ್ಯಾಂಟಿನ್‍ಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದಾಗ ಅಲ್ಲಿ 200 ಮಂದಿಯೂ ಕೂಡ ಕೆಲಸ ನಿರ್ವಹಿಸದೆ ಇರುವುದು ಕಂಡುಬಂದಿದೆ.

ಪ್ರತಿ ತಿಂಗಳು ಪಾಲಿಕೆಗೆ 67 ಲಕ್ಷ ರೂ. ನಷ್ಟವಾಗುತ್ತಿದೆ. ಇದಲ್ಲದೆ, 32 ಜೆಸಿಒಗಳ ಪೈಕಿ 20 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಸುಮಾರು 5 ಲಕ್ಷ ರೂ. ನಷ್ಟವಾಗುತ್ತಿದೆ ಎಂದು ಅವರು ಹೇಳಿದರು. ಒಟ್ಟಾರೆ ಇಲ್ಲದ ಲೆಕ್ಕ ತೋರಿಸಿ ಪ್ರತಿ ತಿಂಗಳು ಪಾಲಿಕೆಗೆ 77 ಲಕ್ಷ ವಂಚನೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಈ ಗುತ್ತಿಗೆಯನ್ನು ಜಾರ್ಜ್, ಸಿದ್ದರಾಮಯ್ಯ ಆಪ್ತರಾದ ಜಿ.ಬಸವರಾಜ್ ಅವರಿಗೆ ನೀಡಿ ಪ್ರತಿ ತಿಂಗಳು ಪ್ರತಿಫಲ ಪಡೆಯುತ್ತಿದ್ದಾರೆ ಎಂದು ರಮೇಶ್ ಆರೋಪಿಸಿದರು. ನೇಮಕವಾಗಿರುವ ಭದ್ರತಾ ಸಿಬ್ಬಂದಿಗಳಲ್ಲಿ ಬಹುತೇಕರು ನಿವೃತ್ತ ಸೈನಿಕರೂ ಅಲ್ಲ, ಎನ್‍ಸಿಸಿ ಕೆಡೆಟ್‍ಗಳೂ ಅಲ್ಲ ಎಂದು ಆರೋಪಿಸಿದರು.

ಈ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಇಂದಿರಾ ಕ್ಯಾಂಟಿನ್‍ಗಳ ಭದ್ರತೆಗೆ ನಿಯೋಜನೆಗೊಂಡಿರುವವರು ಸೈನಿಕರೇ ಅಲ್ಲ ಎಂಬುದರ ಬಗ್ಗೆ ನಿವೃತ್ತ ಸೈನ್ಯಾಧಿಕಾರಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಇದಲ್ಲದೆ, ಬಿಬಿಎಂಪಿ ತ್ಯಾಜ್ಯ ಸಂಸ್ಕರಣಾ ಘಟಕಗಳು ಮತ್ತು ಭೂ ಭರ್ತಿ ಕೇಂದ್ರಗಳಿಗೆ ಭದ್ರತೆ ಒದಗಿಸಲು ನಿಯೋಜಿಸಿರುವ ಮಾರ್ಷಲ್‍ಗಳ ನೇಮಕದಲ್ಲೂ ವಂಚನೆಯಾಗಿದೆ. ಇಲ್ಲೂ ಪ್ರತಿ ತಿಂಗಳು 9 ಲಕ್ಷ ರೂ.ಗೂ ಹೆಚ್ಚು ಹಣ ವಂಚನೆಯಾಗುತ್ತಿದೆ ಎಂದು ಹೇಳಿದರು.

ಈ ಎರಡರಿಂದ ಕೋಟ್ಯಂತರ ರೂಪಾಯಿಗಳನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಕೆಇಡಬ್ಲ್ಯೂಎಸ್ ಸಂಸ್ಥೆಗೆ ನೀಡಿರುವ ಉಪಗುತ್ತಿಗೆಯನ್ನು ಕೂಡಲೇ ರದ್ದುಪಡಿಸಬೇಕು.

ಕೋಟ್ಯಂತರ ರೂ. ವಂಚಿಸಿರುವ ಕೆಇಡಬ್ಲ್ಯೂಎಸ್ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇವರೊಂದಿಗೆ ಶಾಮೀಲಾಗಿರುವ ಪಾಲಿಕೆ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಈ 12 ತಿಂಗಳ ಅವಧಿಯಲ್ಲಿ ಲೂಟಿಯಾಗಿರುವ 9 ಕೋಟಿಗೂ ಹೆಚ್ಚು ಹಣವನ್ನು ವಾಪಸ್ ಪಡೆಯಬೇಕು. ಎನ್‍ಸಿಸಿ ಸರ್ಟಿಫಿಕೆಟ್‍ಗಳ ಅಸಲಿತನದ ಬಗ್ಗೆ ತನಿಖೆ ನಡೆಸಬೇಕು ಎಂದು ಎನ್.ಆರ್.ರಮೇಶ್ ಆಗ್ರಹಿಸಿದರು.

Facebook Comments

Sri Raghav

Admin