ಪುಲ್ವಾಮಾ ಹತ್ಯಾಕಾಂಡ : ಪಾಕ್ ವಿರುದ್ಧ ಸೇಡು ತೀರಿಸಿಕೊಂಡ ಮಧ್ಯಪ್ರದೇಶದ ರೈತರು

ಈ ಸುದ್ದಿಯನ್ನು ಶೇರ್ ಮಾಡಿ

ಭೂಪಾಲ್,ಫೆ.19- ಜಮ್ಮು-ಕಾಶ್ಮೀರದ ಪುಲ್ವಾಮಾದ ಆವಂತಿಪೊರ್‍ನಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿ ಖಂಡಿಸಿ ಮಧ್ಯಪ್ರದೇಶದ ಝಬುವಾ ಜಿಲ್ಲೆಯ ಟೊಮೇಟೊ ಬೆಳೆಗಾರರು ಇನ್ಮುಂದೆ ಪಾಕಿಸ್ತಾನಕ್ಕೆ ತಮ್ಮ ಉತ್ಪನ್ನ ರಪ್ತು ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್‍ಪಿಎಫ್ ಯೋಧರು ಪ್ರಾಣ ಬಲಿದಾನವಾಗಿದೆ. ದೇಶದಲ್ಲಿ ಮಡುಗಟ್ಟಿದ ದುಃಖವಿದೆ. ಇಂಥ ನೀಚಕೃತ್ಯಕ್ಕೆ ಪಾಕಿಸ್ತಾನದ ಬೆಂಬಲವಿದೆ ಎಂದು ಆಕ್ರೋಶಗೊಂಡಿರುವ ಮಧ್ಯಪ್ರದೇಶದ ಅನ್ನದಾತರು ಈ ರೀತಿ ಪ್ರತೀಕಾರ ತೀರಿಸಿಕೊಂಡಿದ್ದಾರೆ.

ಎಂಪಿ ಝಬುವಾ ಪ್ರದೇಶದಲ್ಲಿ ಅತೀ ಹೆಚ್ಚು ಟೊಮೆಟೊ ಬೆಳೆಯಲಾಗುತ್ತೆ. ಈ ಮೊದಲು ತಾವು ಬೆಳೆಯುವ ಟೊಮೆಟೊವನ್ನ ನೆರೆಯ ಪಾಕಿಸ್ತಾನಕ್ಕೂ ರಫ್ತು ಮಾಡುತ್ತಿದ್ದೆವು. ನಮಗೆ ನಷ್ಟವಾದರೂ ಚಿಂತೆಯಿಲ್ಲ ಇನ್ನು ಮುಂದೆ ತಾವು ಬೆಳೆದ ಟೊಮೆಟೊವನ್ನ ಪಾಕ್‍ಗೆ ರಫ್ತು ಮಾಡುವುದಿಲ್ಲ ಎಂದು ರೈತರು ಹೇಳಿದ್ದಾರೆ.

ಟೊಮೇಟೋ ಬೆಳೆಗಾರ ಬಸಂತಿ ಲಾಲ್ ಪಾಟಿದಾರ್, ಕಳೆದ ಒಂದೂವರೆ ದಶಕದಿಂದ ನಾವು ಟೊಮೇಟೋ ಬೆಳೆಯುತ್ತಿದ್ದೇವೆ. ಅವುಗಳನ್ನ ದೆಹಲಿಯ ಏಜೆಂಟ್ ಮೂಲಕ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದೆವು. ಅದರಿಂದ ನಮಗೆ ಒಳ್ಳೆಯ ಲಾಭವೂ ಬರುತ್ತಿತ್ತು.

ಆದರೆ ನಮ್ಮ ಸೈನಿಕರ ಮೇಲೆ ಪಾಕಿಸ್ತಾನದ ಉಗ್ರರು ಪದೇ ಪದೇ ದಾಳಿ ತುಂಬ ನೋವುಂಟು ಮಾಡಿದೆ. ಹೀಗಾಗಿ ನಾವು ಪಾಕಿಸ್ತಾನಕ್ಕೆ ಟೊಮೇಟೋ ರಫ್ತು ಮಾಡದಿರಲು ತಿರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.

ದೇಶ ಕಾಯುವ ಸೈನಿಕರೇ ಇಲ್ಲದಿದ್ದರೆ ರಾಷ್ಟ್ರದ ಗತಿಯೇನು? ನಮಗೆ ಟೊಮೆಟೊ ರಫ್ತು ಆಗದಿದ್ದರೂ ಚಿಂತೆಯಿಲ್ಲ ಎಂದು ಗಟ್ಟಿ ತೀರ್ಮಾನ ಮಾಡಿದ್ದಾರೆ.

ರೈತರ ಈ ಅಚಲ ನಿರ್ಧಾರಕ್ಕೆ ನಮ್ಮ ಬೆಂಬಲವೂ ಇದೆ. ಟೊಮೆಟೊವನ್ನ ಪಾಕ್‍ಗೆ ರಫ್ತು ಮಾಡದಿರಲು ನಿರ್ಧರಿಸಿದ ಝಬುವಾದ ನನ್ನ ರೈತ ಸಹೋದರರು ತೆಗೆದುಕೊಂಡ ನಿರ್ಧಾರಕ್ಕೆ ನನ್ನ ಸೆಲ್ಯೂಟ್. ಅವರ ದೇಶಭಕ್ತಿಯನ್ನು ಮೆಚ್ಚಲೇಬೇಕು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಹೇಳಿದ್ದಾರೆ.

Facebook Comments