ಇಂದಿನಿಂದ ಆನ್‍ಲೈನ್ ನಲ್ಲೇ ಭೂಪರಿವರ್ತನೆ ಪ್ರಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.20- ಕೃಷಿಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬದಲಾಯಿಸಲು ಇರುವ ಭೂ ಪರಿವರ್ತನಾ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಅಫಿಡವಿಟ್ ಆಧಾರಿತ ಆನ್‍ಲೈನ್ ಭೂ ಪರಿವರ್ತನಾ ಪದ್ಧತಿಯನ್ನು ಇಂದಿನಿಂದ ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭೂ ಪರಿವರ್ತನೆಗಾಗಿ ಅರ್ಜಿದಾರರು ಅರ್ಜಿ ಸಲ್ಲಿಸುವಾಗ ಸುಮಾರು 25 ದಾಖಲೆಗಳನ್ನು ಒದಗಿಸಬೇಕಿದ್ದು, ಸಾಕಷ್ಟು ವಿಳಂಬವಾಗುತ್ತಿದೆ. ಇದನ್ನು ತಪ್ಪಿಸಲು ಸರಳವಾಗಿ ಭೂ ಪರಿವರ್ತನಾ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಆನ್‍ಲೈನ್ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.

ಕಂದಾಯ ಇಲಾಖೆಯು ಸಂಬಂಧಪಟ್ಟ ಎಲ್ಲಾ ಇಲಾಖೆಗಳೊಂದಿಗೆ ಸಮಾಲೋಚಿಸಿ ಸಂಪುಟ ಸಭೆಯ ಅನುಮೋದನೆ ಪಡೆದು ಆನ್‍ಲೈನ್ ಪದ್ಧತಿಯನ್ನು ಜಾರಿಗೆ ತಂದಿದೆ ಎಂದರು.ಇದೊಂದು ಐತಿಹಾಸಿಕ ಕಾರ್ಯವಾಗಿದೆ ಎಂದ ಸಚಿವರು, ಅರ್ಜಿದಾರರು ಕಂದಾಯ ಇಲಾಖೆಯ ಜಾಲತಾಣ www.andrecords.karnataka.gov.in ಗೆ ಭೇಟಿ ನೀಡಿ ತಮ್ಮ ಯೂಜರ್ ಐಡಿ ಸೃಜಿಸುವ ಮೂಲಕ ಅಫಿಡವಿಟ್ ಜನರೇಷನ್ ಲಿಂಕ್ ಮೂಲಕ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಸಿಸ್ಟಮ್ ಜನರೇಟೆಡ್ ಅಫಿಡವಿಟ್ ಪಡೆದು ಅದನ್ನು 200ರೂ. ಛಾಪಾಕಾಗದಲ್ಲಿ ಮುದ್ರಿಸಿ ನೋಟರಿ ಅವರಿಂದ ದೃಢೀಕರಿಸಿ ಮತ್ತೆ ಮೇಲಿನ ಜಾಲತಾಣಕ್ಕೆ ಅಪ್‍ಲೋಡ್ ಮಾಡಬೇಕಿದೆ.

ಅಲ್ಲದೆ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಕಚೇರಿಗಳಲ್ಲೂ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಫಿಡವಿಟ್ ಜತೆಗೆ ಇತ್ತೀಚಿನ ಪಹಣಿ, ಮ್ಯೂಟೇಷನ್ ಪ್ರತಿ, ಒಂದೇ ಸರ್ವೆ ನಂಬರ್‍ನಲ್ಲಿ ಹಲವು ಮಂದಿ ಮಾಲೀಕರಿದ್ದಾಗ 11-ಇ ನಕ್ಷೆಯನ್ನು ಒದಗಿಸಬೇಕು.

ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ಒಂದು ವಾರದೊಳಗಾಗಿ ಪ್ರಮಾಣದ ಮೂಲ ಪ್ರತಿಯನ್ನು ಸಂಬಂಧಪಟ್ಟ ತಹಸೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. 48 ಗಂಟೆಗಳ ಒಳಗಾಗಿ ಈ ಅರ್ಜಿಯನ್ನು ತಹಸೀಲ್ದಾರ್ ಅಥವಾ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಆನ್‍ಲೈನ್ ಮೂಲಕ ಸ್ವೀಕೃತವಾದ ಭೂ ಪರಿವರ್ತನಾ ಕೋರಿಕೆಯನ್ನು ಸಂಬಂಧ ಪಟ್ಟ ಇಲಾಖೆ ಪ್ರಾಧಿಕಾರಗಳಿಗೆ ಏಕಕಾಲಕ್ಕೆ ವರ್ಗಾಯಿಸಲಾಗುತ್ತದೆ. ಒಂದು ತಿಂಗಳೊಳಗೆ ಅಭಿಪ್ರಾಯವನ್ನು ನೀಡದಿದ್ದರೆ ಆಕ್ಷೇಪಣೆ ಇಲ್ಲ ಎಂದು ಪರಿಗಣಿಸಲಾಗುತ್ತದೆ. ಆನಂತರ ಅರ್ಜಿದಾರರಿಂದ ನಿಗದಿತ ಶುಲ್ಕ ಪಡೆದು ಭೂ ಪರಿವರ್ತನೆಗೆ ಕ್ರಮ ಕೈಗೊಂಡು 60 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳು ಭೂ ಪರಿವರ್ತನ ಆದೇಶ ಅಥವಾ ಹಿಂಬರಹವನ್ನು ಹೊರಡಿಸಬೇಕಾಗುತ್ತದೆ ಎಂದು ಹೇಳಿದರು.

ಅವಧಿ ವಿಸ್ತರಣೆ:
ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಿರುವ ವಾಸದ ಮನೆಗಳನ್ನು 94ಸಿ, 94ಸಿಸಿಯಡಿ ಸಕ್ರಮಗೊಳಿಸಲು ಅರ್ಜಿ ಸಲ್ಲಿಸುವ ದಿನಾಂಕವನ್ನು ಮಾ.31ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು. ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕಡೆಯ ದಿನಾಂಕ 2018ರ ಸೆಪ್ಟೆಂಬರ್ 16ಕ್ಕೆ ಕೊನೆಯಾಗಿತ್ತು.

ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸುವಂತೆ ಸಾರ್ವಜನಿಕರಿಂದ ಕೋರಿಕೆ ಬಂದ ಹಿನ್ನೆಲೆಯಲ್ಲಿ ನಿಯಮಾವಳಿಗಳಿಗೆ ತಿದ್ದುಪಡಿ ತಂದು ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವ ಆದೇಶವನ್ನು ಹೊರಡಿಸಲಾಗಿದೆ ಎಂದರು.

ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಿರುವ ವಾಸದ ಮನೆಗಳನ್ನು 94ಸಿ, 94ಸಿಸಿಯಡಿ ಸಕ್ರಮಗೊಳಿಸಲು ಅರ್ಜಿ ಸಲ್ಲಿಸುವ ದಿನಾಂಕವನ್ನು ಮಾ.31ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕಡೆಯ ದಿನಾಂಕ 2018ರ ಸೆಪ್ಟೆಂಬರ್ 16ಕ್ಕೆ ಕೊನೆಯಾಗಿತ್ತು. ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸುವಂತೆ ಸಾರ್ವಜನಿಕರಿಂದ ಕೋರಿಕೆ ಬಂದ ಹಿನ್ನೆಲೆಯಲ್ಲಿ ನಿಯಮಾವಳಿಗಳಿಗೆ ತಿದ್ದುಪಡಿ ತಂದು ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವ ಆದೇಶವನ್ನು ಹೊರಡಿಸಲಾಗಿದೆ ಎಂದರು.

Facebook Comments