ಕೇಂದ್ರದಿಂದ ಇನ್ನೂ ಬಾರದ ಬರಪರಿಹಾರದ ಅನುದಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.20-ಮುಂಗಾರು ಹಂಗಾಮಿನ ಬರ ನಿರ್ವಹಣೆಗಾಗಿ ಕೇಂದ್ರ ಸರ್ಕಾರ 949.49ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿದ್ದರೂ ಇದುವರೆಗೆ ಹಣವೂ ಬಿಡುಗಡೆಯಾಗಿಲ್ಲ. ಅಧಿಕೃತ ಮಾಹಿತಿಯೂ ಬಂದಿಲ್ಲ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಗಾರು ಹಂಗಾಮಿನಲ್ಲಿ ರಾಜ್ಯದ 100 ಬರಪೀಡಿತ ತಾಲ್ಲೂಕಗಳ ಪೈಕಿ ತೀವ್ರ ಬರವಿರುವ 72 ತಾಲ್ಲೂಕುಗಳನ್ನು ಮಾತ್ರ ಕೇಂದ್ರ ಸರ್ಕಾರ ಪರಿಗಣಿಸಿದೆ. ಉಳಿದ 28 ತಾಲ್ಲೂಕುಗಳನ್ನು ಬರಪೀಡಿತವೆಂದು ಪರಿಗಣಿಸಿಲ್ಲ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವರಿಗೆ ಮತ್ತೊಮ್ಮೆ ಪತ್ರ ಬರೆದು ಹಣ ಬಿಡುಗಡೆ ಮಾಡುವಂತೆ ಕೋರಲಾಗುವುದು ಎಂದರು.

ಹಿಂಗಾರು ಹಂಗಾಮಿನಲ್ಲಿ 150 ತಾಲ್ಲೂಕುಗಳು ಬರಪೀಡಿತವಾಗಿವೆ ಎಂದು ಘೋಷಿಸಲಾಗಿದ್ದು, 11,384.47 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಮಾರ್ಗಸೂಚಿ ಪ್ರಕಾರ 2064.30 ಕೋಟಿ ರೂ. ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ನೇತೃತ್ವದಲ್ಲಿ ಕೇಂದ್ರದ ಅಧ್ಯಯನ ತಂಡ ರಚನೆಯಾಗಿದ್ದು, ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ಮಾಡಿ ವರದಿ ನೀಡಲಿದೆ ಎಂದು ತಿಳಿಸಿದರು.

ಅವಧಿ ವಿಸ್ತರಣೆ:  ಬಗರ್‍ಹುಕುಂ ಸಾಗುವಳಿದಾರರ ನಮೂನೆ 50 ಮತ್ತು 53ರಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿಯ ದಿನಾಂಕವನ್ನು ಏಪ್ರಿಲ್ 26ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. 2018ರ ಏಪ್ರಿಲ್ 26ಕ್ಕೆ ಅರ್ಜಿಗಳ ವಿಲೇವಾರಿ ದಿನಾಂಕ ಮುಕ್ತಾಯವಾಗಿತ್ತು. ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಕಡ್ಡಾಯವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.

ಅಲ್ಲದೆ, ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರ ಜಮೀನನ್ನು ಸಕ್ರಮಗೊಳಿಸಲು ಮತ್ತೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಮಾರ್ಚ್ 16ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಹೊಸ 50 ತಾಲ್ಲೂಕುಗಳಲ್ಲಿ ಕಂದಾಯ ಇಲಾಖೆ ಹೊರತುಪಡಿಸಿ ಇತರ ಇಲಾಖೆಗಳು ಆರಂಭವಾಗಿಲ್ಲ. 14 ಇಲಾಖೆಗಳು ಕಾರ್ಯ ನಿರ್ವಹಿಸಬೇಕಾಗಿದೆ. ಆ ಇಲಾಖೆಗಳಿಗೆ ಅಗತ್ಯವಿರುವ ಹುದ್ದೆಗಳ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

Facebook Comments