ಭಾರತ – ಪಾಕ್ ವಿಶ್ವಕಪ್ ಕ್ರಿಕೆಟ್ ಮೇಲೆ ಕಾರ್ಮೋಡದ ಛಾಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.20- ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರರು ಸಿಆರ್‍ಪಿಎಫ್ ಯೋಧರ ಮೇಲೆ ನಡೆಸಿದ ಪೈಶಾಚಿಕ ಕೃತ್ಯ ಮುಂಬರುವ ವಿಶ್ವಕಪ್ ಕ್ರಿಕೆಟ್ ಮೇಲೆ ಕಾರ್ಮೋಡದ ಛಾಯೆ ಆವರಿಸುವ ಸಾಧ್ಯತೆ ಇದೆ.  ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್ ಮಹಾಸಮರದಲ್ಲಿ ಪಾಕಿಸ್ತಾನದ ಎದುರು ಭಾರತ ಆಡದಿರಲು ಗಂಭೀರ ಚಿಂತನೆ ನಡೆಸಿದೆ.

ಒಂದು ವೇಳೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಕ್ ವಿರುದ್ಧ ಆಡಬಾರದೆಂಬ ತೀರ್ಮಾನ ಕೈಗೊಂಡರೆ ನಾವು ಅದನ್ನು ಪಾಲಿಸುತ್ತೇವೆ ಎಂದು ಟೀಮ್ ಇಂಡಿಯಾದ ಆಟಗಾರರು ನಿರ್ಧಾರ ಕೈಗೊಂಡಿರುವುದಾಗಿ ವರದಿಯಾಗಿದೆ.

ಅಂತಿಮವಾಗಿ ಬಿಸಿಸಿಐ ತೀರ್ಮಾನದ ಮೇಲೆ ಎಲ್ಲವೂ ಅವಲಂಬಿತವಾಗಿವೆ. ನಾವು ದೇಶದ ಜನತೆಯ ಗೌರವಕ್ಕೆ ಬೆಲೆ ಕೊಡುತ್ತೇವೆ. ಒಂದು ವೇಳೆ ಪಾಕ್ ಜತೆ ಆಟವಾಡಬಾರದೆಂಬ ಕೂಗು ಹೆಚ್ಚಾದರೆ ಅದನ್ನು ಸಹ ಪಾಲನೆ ಮಾಡಲು ಈಗಾಗಲೇ ಮಾನಸಿಕವಾಗಿ ಸಿದ್ಧರಾಗಿದ್ದೇವೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಹಿರಿಯ ಆಟಗಾರರೊಬ್ಬರು ಹೇಳಿದ್ದಾರೆ.

ಜೂನ್ 16ರಂದು ಇಂಗ್ಲೆಂಡ್‍ನ ಮ್ಯಾಂಚೆಸ್ಟರ್‍ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ವಿಶ್ವಕಪ್‍ನ ಮೊದಲ ಪಂದ್ಯ ನಡೆಯಲಿದೆ. ಏಷ್ಯಾಕಪ್‍ನ ಸಾಂಪ್ರದಾಯಿಕ ಎದುರಾಳಿಯಾಗಿರುವ ಈ ಎರಡೂ ರಾಷ್ಟ್ರಗಳ ನಡುವೆ ನಡೆಯಲಿರುವ ಪಂದ್ಯವನ್ನು ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಆದರೆ, ಕಳೆದ ಗುರುವಾರ ಪುಲ್ವಾಮಾದ ಆವಂತಿಪುರಂನಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾದ ಆತ್ಮಾಹುತಿ ದಳದ ಉಗ್ರರು ನಡೆಸಿದ ಬಾಂಬ್ ದಾಳಿಯಿಂದ 40 ಯೋಧರು ಹುತಾತ್ಮರಾಗಿದ್ದರು.  ಈ ಘಟನೆ ನಡೆದ ನಂತರ ಪಾಕ್ ವಿರುದ್ಧ ಭಾರತದ ಕೋಟ್ಯಂತರ ಜನರು ನೆರೆರಾಷ್ಟ್ರದ ಮೇಲೆ ಕೊತಕೊತ ಕುದಿಯುತ್ತಿದ್ದಾರೆ.

ಈಗಾಗಲೇ ಹರ್ಭಜನ್‍ಸಿಂಗ್ ಸೇರಿದಂತೆ ಅನೇಕರು ಪಾಕ್ ವಿರುದ್ಧ ಭಾರತ ಆಡಲೇಬಾರದೆಂದು ಬಿಸಿಸಿಐ ಮೇಲೆ ಒತ್ತಡ ಹಾಕಿದ್ದಾರೆ. ಮೂಲಗಳ ಪ್ರಕಾರ ಈ ವಾರಾಂತ್ಯಕ್ಕೆ ಬಿಸಿಸಿಐ ಐಸಿಸಿಗೆ ವೇಳಾಪಟ್ಟಿ ಬದಲಿಸಬೇಕೆಂದು ಮನವಿ ಮಾಡಲಿದೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin