‘ಸೂರ್ಯನಿಲ್ಲದ ಬಾನಿನಲ್ಲಿ’ ಲೋಹದ ಹಕ್ಕಿಗಳ ಚಿತ್ತಾರ, ಏರ್ ಷೋ-2019ಕ್ಕೆ ವಿದ್ಯುಕ್ತ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.20- ಸೂರ್ಯ ಕಿರಣ್ ಆಗಸದಿಂದ ಧರೆಗುರುಳಿದ ಕಹಿ ನೆನಪಿನ ನಡುವೆ ಇಂದು ಏರ್ ಷೋ-2019ಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ಯಲಹಂಕ ವಾಯುನೆಲೆಯಲ್ಲಿ ದೇಶ-ವಿದೇಶದ ಯುದ್ಧ ವಿಮಾನಗಳ ಸಾಹಸದ ನಡುವೆಯೇ ನಭೋ ಮಂಡಲದಲ್ಲಿ ತ್ರಿವರ್ಣ ಧ್ವಜದ ಚಿತ್ತಾರ ಮೂಡಿಸುತ್ತಿದ್ದ ಸೂರ್ಯ ಕಿರಣ್ ಇಲ್ಲದೆ ಈ ಬಾರಿಯ ಏರ್ ಷೋ ಆರಂಭಗೊಂಡಿದೆ.

ಆಗಸದಲ್ಲಿ ಯುದ್ಧ ವಿಮಾನಗಳ ಘರ್ಜನೆ ಕಿವಿಗಡಚಿಕ್ಕುವಂತಿತ್ತು. ಗ್ಲೋಬ್ ಮಾಸ್ಟರ್ ದೈತ್ಯ ವಿಮಾನ, ಎಚ್‍ಎಎಲ್‍ನ ಅತ್ಯಂತ ಪುಟ್ಟ ವಿಮಾನಗಳು ಸ್ವೀಡನ್ ಗ್ರೈಪೇನ್ ಯುದ್ಧ ವಿಮಾನಗಳು ವಿವಿಧ ಸಾಹಸ ಪ್ರದರ್ಶನಗಳ ಮೂಲಕ ಎಲ್ಲರ ಗಮನ ಸೆಳೆದವು. ರೆಫೇಲ್ ಯುದ್ದ ವಿಮಾನ ಕೂಡ ಇಂದಿನ ಷೋನಲ್ಲಿ ಭಾಗವಹಿಸಿರುವುದು ವಿಶೇಷ.

ಸಾರಂಗ, ಧ್ರುವ, ತೇಜ್ವಸ್, ಸುಖೋಯ್ ಸೇರಿದಂತೆ ದೇಶ-ವಿದೇಶದ ಸುಮಾರ 55 ವಿವಿಧ ಯುದ್ಧ ವಿಮಾನಗಳು ನೀಲಾಕಾಶದಲ್ಲಿ ಚಿತ್ತಾರ ಮೂಡಿಸಿದವು. ಯುದ್ಧ ವಿಮಾನದಲ್ಲಿ ಬ್ಯಾಟಿಕ್ಸ್ ಲಲನೆಯರ ನರ್ತನ ಎಲ್ಲರ ಕಣ್ಮನ ಸೆಳೆಯಿತು.

ಏರ್ ಷೋಗೆ ಹೆಚ್ಚಿನ ಭದ್ರತೆ:  ಏರ್ ಷೋಗೆ ದೇಶ ವಿದೇಶದ ಗಣ್ಯರು, ಸಾರ್ವಜನಿಕರು ಆಗಮಿಸಿದ ಹಿನ್ನೆಲೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿತ್ತು. ನಾಲ್ವರು ಡಿಸಿಪಿ, 20ಮಂದಿ ಎಸಿಪಿ, 60ಮಂದಿ ಸಿಪಿಐ, 200ಮಂದಿ ಸಬ್ ಇನ್ಸ್ ಫೆಕ್ಟರ್ ಹಾಗೂ 5ಸಾವಿರ ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಸಿಆರ್‍ಪಿಎಫ್, ಅಗ್ನಿಶಾಮಕ ದಳ ಸಿಬ್ಬಂದಿ, ಟ್ರಾಫಿಕ್ ಪೊಲೀಸ್, ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಸೇವೆಗೆ ಬಳಸಿಕೊಳ್ಳಲಾಗಿದೆ. ಹೊರಭಾಗದ ವೀಕ್ಷಕರ ಮೇಲೆ ಹದ್ದಿನ ಕಣ್ಣಿರಿಸಲು ಸೂಚಿಸಲಾಗಿದ್ದು ಯಾವುದೇ ಗುರುತು ಪರಿಚಯವಿಲ್ಲದೆ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ.

ಹಾಸ್ಟೆಲ್, ಪಿಜಿ, ಹೊಟೇಲ್ ಮಾಲೀಕರಿಗೂ ನೋಟಿಸ್ ನೀಡಲಾಗಿದ್ದು ಅಪರಿಚಿತರಿಗೆ ಕೊಠಡಿಗಳನ್ನು ನೀಡುವಾಗ ಸೂಕ್ತ ದಾಖಲೆ ಪಡೆದು ನೀಡುವಂತೆ ಆದೇಶಿಸಲಾಗಿದೆ.

# ಸಂಚಾರ ಬದಲಾವಣೆ:
ಏರ್ ಷೋ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಸಂಚಾರದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಹೈದರಾಬಾದ್‍ನಿಂದ ಬರುವ, ಹೋಗುವ ವಾಹನಗಳಿಗೆ ಬಾಗಲೂರು, ಹೊಸಕೋಟೆ ಮಾರ್ಗವಾಗಿ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನಿಂದ-ಹೈದರಾಬಾದ್ ಕಡೆಗೆ ಹೋಗುವ ವಾಹನಗಳಿಗೆ ಹೆಬ್ಬಾಳ, ಯಲಹಂಕ, ದೊಡ್ಡಬಳ್ಳಾಪುರ, ಹಿಂದೂಪುರ ಮಾರ್ಗವಾಗಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅಂತೆಯೇ ಹೊರಗಿನಿಂದ ಏರ್ ಷೋಗೆ ಬರುವ ಸಾರ್ವಜನಿಕರಿಗೆ ಮೆಜೆಸ್ಟಿಕ್, ಮಾರ್ಕೆಟ್, ಶಿವಾಜಿನಗರ, ಜೆಪಿನಗರ, ಕೆಂಗೇರಿ, ಸ್ಯಾಟ್‍ಲೈಟ್ ಬಸ್ ನಿಲ್ಧಾಣಗಳಿಂದ ಹೆಚ್ಚುವರಿ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.  ಏರ್ ಷೋನಿಂದಾಗಿ 60ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆ ನಿರೀಕ್ಷೆ ಮಾಡಲಾಗಿದೆ.

Facebook Comments

Sri Raghav

Admin