ಫೈರ್ ಬ್ರಾಂಡ್ ಅನಂತ್‍ಕುಮಾರ್ ಹೆಗಡೆ ಮಣಿಸಲು ಕಾಂಗ್ರೆಸ್ ರಣತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.20-ಪದೇ ಪದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ವಿವಾದಕ್ಕೀಡಾಗಿರುವ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಅವರನ್ನು ಸೋಲಿಸಲು ರಣತಂತ್ರರೂಪಿಸಿರುವ ಕಾಂಗ್ರೆಸ್ ಉತ್ತರ ಕನ್ನಡ ಭಾಗದ ಪ್ರಭಾವಿ ನಾಯಕರನ್ನು ಸೆಳೆಯಲಾರಂಭಿಸಿದೆ. ಅದರ ಮೊದಲ ಪ್ರಯತ್ನವಾಗಿ ಮಾಜಿ ಶಾಸಕ ಜೆ.ಡಿ.ನಾಯಕ್ ಅವರನ್ನು ಇಂದು ಕಾಂಗ್ರೆಸ್‍ಗೆ ಸೇರಿಸಿಕೊಳ್ಳಲಾಯಿತು.

ಭಟ್ಕಳ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಜೆ.ಡಿ.ನಾಯಕ್ ಅವರು, ಉತ್ತರ ಕನ್ನಡ ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಕಾಂಗ್ರೆಸ್‍ಗೆ ಹಿಂದಿರುಗಿದ್ದಾರೆ. ಶತಾಯ ಗತಾಯ ಅನಂತ್‍ಕುಮಾರ್ ಹೆಗಡೆ ಅವರನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದೆ ಎನ್ನಲಾಗಿದೆ.

ಚುನಾವಣಾ ಪೂರ್ವಭಾವಿಯಾಗಿ ತಾಲೀಮು ಆರಂಭಿಸಿರುವ ದೇಶಪಾಂಡೆ, ಪಕ್ಷ ಬಿಟ್ಟು ಹೋದ ನಾಯಕರನ್ನು ಮರಳಿ ಕರೆತರುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆ.ಡಿ.ನಾಯಕ್ ಅವರನ್ನು ಕಾಂಗ್ರೆಸ್‍ಗೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಬಿಜೆಪಿಯ ಹಿಂದುತ್ವಕ್ಕೆ ಬೇಸತ್ತು ಅವರು ಕಾಂಗ್ರೆಸ್ ವಾಪಸಾಗಿದ್ದಾರೆ ಎಂದು ಹೇಳಿದರು. ಬಿಜೆಪಿಯಲ್ಲಿ ಹಿಂದುತ್ವ ಎಂದರೆ ಬರಿ ಕೋಮುವಾದ, ವೈಷಮ್ಯದ ರಾಜಕಾರಣ. ಅಲ್ಲಿ ಸರ್ವಸಮಾನತೆ ಇಲ್ಲ.

ಕಾಂಗ್ರೆಸ್‍ನಲ್ಲಿ ಮಾತ್ರ ಜಾತ್ಯತೀತ ತತ್ವಗಳಿಗೆ ಅವಕಾಶಗಳಿವೆ. ಕೇವಲ ರಾಜಕಾರಣಕ್ಕಾಗಿ ಹಿಂದುತ್ವ ಬಳಸಿಕೊಳ್ಳುತ್ತಿರು ವುದರಿಂದ ಜೆ.ಡಿ.ನಾಯಕ್ ಅವರಂತಹ ಹಲವಾರು ಮುಖಂಡರು ಬೇಸರಗೊಂಡಿದ್ದಾರೆ ಎಂದರು.

ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ. ಆ ಹಿನ್ನೆಲೆಯಲ್ಲಿ ಜೆ.ಡಿ.ನಾಯಕ್ ಅವರನ್ನು ಕಾಂಗ್ರೆಸ್‍ಗೆ ಮರಳಿ ಕರೆತರಲಾಗಿದೆ ಎನ್ನುವುದು ಆಧಾರ ರಹಿತ ವದಂತಿ. ಸದ್ಯಕ್ಕೆ ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.

ಅನಂತ್‍ಕುಮಾರ್ ಹೆಗಡೆ ಅವರು ಐದು ಬಾರಿ ಸಂಸದರಾಗಿ ಉತ್ತರ ಕನ್ನಡ ಕ್ಷೇತ್ರವನ್ನು ಸ್ಪರ್ಧಿಸಿದ್ದಾರೆ. ಆದರೆ, ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯ. ಲೋಕಸಭೆಯಲ್ಲೂ ಅವರು ಕ್ರಿಯಾಶೀಲರಾಗಿಲ್ಲ. ಕೇವಲ ಪ್ರಚೋದನಕಾರಿ ಭಾಷಣ ಮಾಡಿ ಕೋಮು ವೈಷಮ್ಯ ಮೂಡಿಸುವುದೇ ಅವರ ಸಾಧನೆ. ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಸಾಧನೆ ಶೂನ್ಯ ಎಂದು ಕಿಡಿಕಾರಿದರು.

ಜೆ.ಡಿ.ನಾಯಕ್ ಭಟ್ಕಳ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನನ್ನ ಹಳೆಯ ಸ್ನೇಹಿತರು. ಅವರ ಮರಳುವಿಕೆಯಿಂದ ಪಕ್ಷದ ಬಲವರ್ಧನೆಯಾಗಲಿದೆ ಎಂದು ಹೇಳಿದರು. ಎಐಸಿಸಿ ಕಾರ್ಯದರ್ಶಿ ವಿಷ್ಣುನಾದನ್ ಹಾಗೂ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments