‘ಪದೇ ಪದೇ ದೇಶಪ್ರೇಮವನ್ನು ಎದೆಬಗೆದು ತೋರಿಸಬೇಕಿಲ್ಲ’: ಬರಗೂರು ರಾಮಚಂದ್ರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.20- ಪದೇ ಪದೇ ದೇಶಪ್ರೇಮವನ್ನು ಎದೆಬಗೆದು ತೋರಿಸಬೇಕಿಲ್ಲ. ಅದು ನಿರಂತರವಾಗಿ ಎಲ್ಲರ ಹೃದಯದಲ್ಲಿರುತ್ತದೆ. ಭಯೋತ್ಪಾದನೆಯು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ವಿಶ್ವವ್ಯಾಪಿಯಾಗಿದ್ದು, ಸದಾ ಖಂಡನೆಗೆ ಅರ್ಹವಾಗಿದೆ ಎಂದು ಹಿರಿಯ ಚಿಂತಕ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಸಾಹಿತ್ಯ ಪರಿಷತ್‍ನಲ್ಲಿ ಆಯೋಜಿಸಿದ್ದ ಭಾರತೀಯ ವೀರಯೋಧರ ಮೇಲಿನ ಪೈಶಾಚಿಕ ಕೃತ್ಯ ಖಂಡಿಸಿ ಏರ್ಪಡಿಸಿದ್ದ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಯೋಧರು ಸಮರ್ಪಣಾ ಭಾವದಿಂದ ತಮ್ಮನ್ನು ಅರ್ಪಿಸಿಕೊಂಡಿರುತ್ತಾರೆ.

ತಮ್ಮ ಕುಟುಂಬ, ಪರಿವಾರದೊಂದಿಗೆ ಸಂಪರ್ಕ ಕಡಿದುಕೊಂಡು ದೂರದ ಯಾವುದೋ ಸ್ಥಳದಲ್ಲಿ ದೇಶ ರಕ್ಷಣೆಯಲ್ಲಿರುತ್ತಾರೆ. ಕನಿಷ್ಠ ಪೋನ್ ಸಂಪರ್ಕವೂ ಇಲ್ಲದೆ, ಮಳೆ-ಗಾಳಿ, ಚಳಿ ಎನ್ನದೆ ದಿನದ 24 ಗಂಟೆ ಕರ್ತವ್ಯದಲ್ಲಿರುತ್ತಾರೆ. ಹಾಗಾಗಿಯೇ ಅವರ ಹತ್ಯೆಯನ್ನು ಇಡೀ ದೇಶವೇ ಖಂಡಿಸಿದೆ ಎಂದರು.

ಲೋಕಸಭೆ ಚುನಾವಣೆ ಹತ್ತಿರವಿರುವಾಗ ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಈ ಪ್ರಕರಣದಲ್ಲಿ ರಾಜಕೀಯ ಬೆರೆಸದಿರುವುದು ಶ್ಲಾಘನೀಯ ಎಂದು ವಿಮರ್ಶಿಸಿದರು. ಹತ್ಯೆಯನ್ನು ಸಂಭ್ರಮಿಸುವ ಜನರಿರುವುದನ್ನು ಕುರಿತು ಪ್ರಸ್ತಾಪಿಸಿದ ಅವರು, ಗಾಂಧೀಜಿಯವರ ಹತ್ಯೆಯನ್ನೂ ಈ ದೇಶದ ಒಂದು ವರ್ಗ ಸಂಭ್ರಮಿಸಿದ ಉದಾಹರಣೆಗಳಿವೆ.

ಎಲ್ಲೋ ಕೆಲವು ಕಿಡಿಗೇಡಿಗಳು ಆಚರಿಸಿದ ಸಂಭ್ರಮಕ್ಕೆ ಹೆಚ್ಚು ಮಹತ್ವ ಕೊಡದೆ ಎಲ್ಲ ಜಾತಿ, ಧರ್ಮದವರೂ ಒಂದಾಗಿ ಯೋಧರ, ಭಾರತೀಯ ಸೈನ್ಯದ ಬೆಂಬಲವಾಗಿ ನಿಂತಿರುವುದು ಒಂದು ಗುಣಾತ್ಮಕ ಹೆಜ್ಜೆಯಾಗಿದೆ ಎಂದು ಹೇಳಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಸಮುದಾಯದ ಕೊಡುಗೆಯನ್ನು ಉಲ್ಲೇಖಿಸಿದ ಅವರು, ಪಂಡಿತ್ ರಾಮ್‍ಪ್ರಸಾದ್ ಬಿಸ್ಮಿಲ್ಲಾ ಅವರೊಡನೆ ಗಲ್ಲಿಗೇರಿದ ಅಶ್ವಖಾನ್ ಮುಸ್ಲಿಂ ಬಾಂಧವನಾಗಿದ್ದು, ಅನೇಕ ಮುಸ್ಲಿಂ ಮಹಿಳೆಯರು ದೇಶಕ್ಕಾಗಿ ಆತ್ಮಾರ್ಪಣೆ ಮಾಡಿರುವುದನ್ನು ಸ್ಮರಿಸಿದರು.
ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಸದಾ ಸಾಮರಸ್ಯ ಹಾಗೂ ಸೌಹಾರ್ದತೆಯನ್ನು ಪಸರಿಸುವಲ್ಲಿ ಶ್ರಮಿಸುತ್ತಿರುವುದು ಪ್ರಶಂಸನೀಯ ಎಂದರು.

ಕರ್ನಾಟಕ ಮುಸ್ಲಿಂ ಜಮಾತ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಾಪಿ ಸಾದಿ ಮಾತನಾಡಿ, ವಿಶ್ವದೆಲ್ಲೆಡೆ ಭಯೋತ್ಪಾದನೆ ಹರಡಿದ್ದು, ಎಲ್ಲ ಸಮುದಾಯದವರೂ ಈ ನೋವನ್ನುಂಡಿದ್ದು, ನಾವುಗಳೆಲ್ಲ ಅದರ ವಿರುದ್ಧ ಹೋರಾಡಬೇಕಿದೆ ಎಂದರು.

ಮಹಮ್ಮದೀಯರ ವೇದಿಕೆ ಅಧ್ಯಕ್ಷ ಸಮೀವುಲ್ಲಾಖಾನ್ ಮಾತನಾಡಿ, ಕರ್ನಾಟಕ ಏಕೀಕರಣದ ಮೊದಲ ಹುತಾತ್ಮ ರಂಜಾನ್ ಸಾಬರ ಹೆಸರಿನಲ್ಲಿ ಪ್ರಶಸ್ತಿ ನೀಡುವುದರೊಂದಿಗೆ ಮಸೀದಿ, ಮದರಸಗಳಲ್ಲಿ ಕನ್ನಡ ಕಲಿಕಾ ತರಗತಿಗಳನ್ನು ನಡೆಸುತ್ತಿರುವ ವೇದಿಕೆಯು ಶಾಂತಿ-ಸೌಹಾರ್ದತೆಗಾಗಿ ಶ್ರಮಿಸುತ್ತಿದೆ ಎಂದರು.

ಹಿರಿಯ ಪತ್ರಕರ್ತ ಬೆಲಗೂರು ಸಮೀವುಲ್ಲಾ, ಶ್ರ.ದೇ.ಪಾಶ್ರ್ವನಾಥ್, ವಚನ ಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ಉಪನ್ಯಾಸಕಿ ಡಾ.ಶಕೀರಾ ಖಾನಂ ಮುಂತಾದವರು ಉಪಸ್ಥಿತರಿದ್ದರು.

Facebook Comments