ಶಾರದಾ ಚಿಟ್‍ಫಂಡ್ ಮತ್ತು ರೋಸ್‍ವ್ಯಾಲಿ ಹಗರಣಗಳ ವಿಚಾರಣೆಯಿಂದ ದೂರ ಸರಿದ ಸುಪ್ರೀಂ ಜಡ್ಜ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.20 (ಪಿಟಿಐ)- ಬಹುಕೋಟಿ ರೂ.ಗಳ ಶಾರದಾ ಚಿಟ್‍ಫಂಡ್ ಮತ್ತು ರೋಸ್‍ವ್ಯಾಲಿ ಹಗರಣಗಳ ಸಂಬಂಧದ ತನಿಖೆಗೆ ಅಡ್ಡಿಪಡಿಸಿದ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸಿಬಿಐ ಸಲ್ಲಿಸಿರುವ ವಿಚಾರಣೆಯಿಂದ ಸುಪ್ರೀಂಕೋರ್ಟ್ ನ್ಯಾಯಾಧೀಶ ಎಲ್.ನಾಗೇಶ್ವರ ರಾವ್ ಅವರು ದೂರ ಸರಿದಿದ್ದಾರೆ.

ಈ ಪ್ರಕರಣದಿಂದ ರಾವ್ ದೂರ ಸರಿದಿರುವ ಹಿನ್ನಲೆಯಲ್ಲಿ ಈ ಸಂಬಂಧ ಸಿಬಿಐ ಮನವಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಫೆ.27ಕ್ಕೆ ಮುಂದೂಡಿದೆ. ಈ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹಾಗೂ ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್ ಮತ್ತು ಸಂಜಯ್ ಖನ್ನಾ ಇದ್ದರು. ಆದರೆ, ರಾವ್ ಈ ಪ್ರಕರಣದ ವಿಚಾರಣೆಯಿಂದ ನಿರ್ಗಮಿಸಿದ್ದರಿಂದ ಪೀಠವು ವಿಚಾರಣೆಯನ್ನು ಮುಂದಕ್ಕೆ ಹಾಕಿದೆ.

ಈ ಹಿಂದೆ ತಾವು ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲರಾಗಿದ್ದ ಕಾರಣ ಈ ಪ್ರಕರಣದ ವಿಚಾರಣೆ ನಡೆಸಲು ತಮಗೆ ಸಾಧ್ಯವಾಗುವುದಿಲ್ಲ ಎಂದು ನ್ಯಾಯಮೂರ್ತಿ ರಾವ್ ಕಾರಣ ನೀಡಿದ್ದಾರೆ.

ಫೆ.18ರಂದು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಲೈ ಕುಮಾರ್ ಡೀ, ಡಿಜಿಪಿ ವೀರೇಂದ್ರ ಕುಮಾರ್ ಹಾಗೂ ಕೋಲ್ಕತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್, ಸಿಬಿಐ ಸಲ್ಲಿಸಿದ್ದ ನ್ಯಾಯಾಲಯ ನಿಂದನೆ ಅರ್ಜಿಗೆ ಪ್ರತಿಯಾಗಿ ಸುಪ್ರೀಂಕೋರ್ಟ್‍ಗೆ ಪ್ರತ್ಯೇಕ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದರು.

Facebook Comments